ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಪಂ ವ್ಯಾಪ್ತಿಯ ಕೆರೆ-ಕಟ್ಟೆ ತುಂಬಿಸುವ ಏತ ನೀರಾವರಿ ಯೋಜನೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ವೈ.ಪಿ.ಮಂಜು, ರೂಪಾ, ನಟರಾಜು ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ
ಪಾಂಡವಪುರ:ನಮ್ಮ ಪೂರ್ವಿಕರು ನಿರ್ಮಿಸಿರುವ ಕೆರೆ-ಕಟ್ಟೆಗಳು ವೈಜ್ಞಾನಿಕವಾಗಿದ್ದ ಕಾರಣ ನೈಸರ್ಗಿಕವಾಗಿ ನೀರು ತುಂಬುತ್ತಿದ್ದವು. ಆದರೀಗ ಏತ ನೀರಾವರಿ ಯೋಜನೆಗಳ ಮೂಲಕ ಕೆರೆ-ಕಟ್ಟೆ ತುಂಬಿಸಬೇಕಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಸುಂಕಾತೊಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಕೆರೆ-ಕಟ್ಟೆಗಳನ್ನು ತುಂಬಿಸುವ 5 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಹಾಗೂ ಅತ್ತಿಗಾನಹಳ್ಳಿ ಮಾಡ್ರಳ್ಳಿ, ಎಸ್.ಕೊಡಗಳ್ಳಿ, ಕಾಳೇನಹಳ್ಳಿ ಗ್ರಾಮಗಳಲ್ಲಿ ರಸ್ತೆ, ಚರಂಡಿ ಕಾಮಗಾರಿಗಳು ಸೇರಿದಂತೆ ಒಟ್ಟಾರೆ 8.5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೆರೆ-ಕಟ್ಟೆಗಳಿಗೆ ನೈಸರ್ಗಿಕವಾಗಿ ಹರಿದು ಬರುತ್ತಿದ್ದ ನೀರು ಸ್ಥಗಿತವಾಗಿದೆ. ಇದಕ್ಕೆ ನಾವುಗಳೇ ಕಾರಣವಾಗಿದ್ದೇವೆ. ಒತ್ತುವರಿ, ಕಟ್ಟಡ ನಿರ್ಮಾಣ, ಹೀಗೆ ನಾನಾ ಕಾರಣಗಳಿಂದ ನೀರಿನ ಮೂಲಗಳನ್ನು ಮುಚ್ಚಿರುವ ಪರಿಣಾಮ ಕೆರೆ-ಕಟ್ಟೆಗಳು ಬತ್ತುತ್ತಿವೆ. ಕೆರೆ-ಕಟ್ಟೆಗಳು ಅಂತರ್ಜಲದ ಮೂಲವಾಗಿದ್ದು, ಅವು ಬತ್ತದಂತೆ ನಾವು ಎಚ್ಚರಿಕೆ ವಹಿಸಬೇಕು ಎಂದರು.
ಏತ ನೀರಾವರಿ ಯೋಜನೆಯಡಿ ಬಿಟ್ಟು ಹೋಗಿದ್ದ ಕೆಲ ಗ್ರಾಮಗಳ ಕೆರೆ-ಕಟ್ಟೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಹಿಂದೆ ಕೆರೆ-ಕಟ್ಟೆಗಳಿಗೆ ಕೃತಕವಾಗಿ ನೀರು ತುಂಬಿಸುವ ಅವಶ್ಯಕತೆ ಇರಲಿಲ್ಲ. ಮಳೆ ಬಂದಾಗ ತುಂಬಿಕೊಳ್ಳುತ್ತಿದ್ದವು. ಮನುಷ್ಯನ ಅತಿಯಾಸೆಯಿಂದ ನೈಸರ್ಗಿಕವಾಗಿ ಹರಿದು ಬರುವ ನೀರಿನ ಮಾರ್ಗಗಳನ್ನು ಮುಚ್ಚಿರುವ ಪರಿಣಾಮ ಇಂತಹ ಪರಿಸ್ಥಿತಿ ಬಂದಿದೆ. ಈ ಕೆರೆ-ಕಟ್ಟೆಗಳು ನಿಮ್ಮದಾಗಿದೆ. ಅದನ್ನು ನೀವೇ ಉಳಿಸಿಕೊಳ್ಳಬೇಕು. ಮುಚ್ಚಿರುವ ಜಲಮೂಲಗಳನ್ನು ತೆಗೆದು ಮಳೆ ನೀರು ಸರಾಗವಾಗಿ ಹರಿದು ಕೆರೆ ತುಂಬುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಏತ ನೀರಾವರಿ ಯೋಜನೆಯಿಂದ ಕುರಹಟ್ಟಿ, ಅತ್ತಿಗಾನಹಳ್ಳಿ, ಮೇನಾಗರ, ಮೂಡಲಕೊಪ್ಪಲು, ಸುಂಕಾತೊಣ್ಣೂರು, ಚೀಕನಹಳ್ಳಿ, ನರಹಳ್ಳಿ, ಬೋಳೇನಹಳ್ಳಿ ಗ್ರಾಮದ ಕೆರೆಗಳಿಗೆ ನೀರು ಹರಿದು ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಇಂಜಿನಿಯರ್ ರೂಪಾ, ಮುಖಂಡರಾದ ಅತ್ತಿಗಾನಹಳ್ಳಿ ನಾಗರಾಜು, ಎಸ್.ಡಿ.ನಟರಾಜು, ಎಸ್.ಆರ್.ಜ್ಞಾನೇಶ್, ಎಸ್.ಡಿ.ಕುಮಾರ, ಅನುವಾಳು ವಿಶ್ವ, ಕಾಳೇನಹಳ್ಳಿ ಆನಂದ್, ಪಂಚಲಿಂಗೇಗೌಡ, ಪುಟ್ಟರಾಜು ಇತರರು ಇದ್ದರು.