ಮೈಷುಗರ್‌ನಲ್ಲಿ ಅವ್ಯವಹಾರ ತನಿಖೆಗೆ ಸಮಿತಿ ರಚನೆ: ನಿವೃತ್ತ ಆಯುಕ್ತ ಶೇಖರ್ ಗಾಯಕ್‌ವಾಡ್ ನೇತೃತ್ವ

ಮಂಡ್ಯ ನಗರದಲ್ಲಿರುವ ಮೈಷುಗರ್ ಕಾರ್ಖಾನೆ ಹೊರನೋಟ.
ಮಂಡ್ಯ ನಗರದಲ್ಲಿರುವ ಮೈಷುಗರ್ ಕಾರ್ಖಾನೆ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಸಕ್ಕರೆ ಕಾರ್ಖಾನೆ
  • ಅವ್ಯವಹಾರದ ತನಿಖೆಗೆ ಸಮಿತಿ
  • ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ
ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ 2021-22ನೇ ಸಾಲಿನಿಂದ ಈವರೆಗೆ ನಡೆದಿದೆ ಎನ್ನಲಾದ ಅವ್ಯವಹಾರ, ನಿಯಮಬಾಹಿರ ಚಟುವಟಿಕೆ, ನಷ್ಟ, ಅಕ್ರಮ ನೇಮಕಾತಿ ಆರೋಪಗಳ ಕುರಿತು ಪರಿಶೀಲನೆ ನಡೆಸಿ ವರದಿ ನಡೆಸಲು ರಾಜ್ಯ ಸರ್ಕಾರ ತನಿಖಾ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ.
ಮಹಾರಾಷ್ಟ್ರದ ನಿವೃತ್ತ ಆಯುಕ್ತ ಶೇಖರ್ ಗಾಯಕ್‌ವಾಡ್ ನೇತೃತ್ವದಲ್ಲಿ ಸದಸ್ಯರಾದ ಮಹಾರಾಷ್ಟ್ರದ ಪುಣೆಯಲ್ಲಿರುವ ವಸಂತದಾದ ಷುಗರ್ ಇನ್‌ಸ್ಟಿಟ್ಯೂಟ್‌ನ ಷುಗರ್ಸ್ ಇಂಜಿನಿಯರಿಂಗ್ ಮತ್ತು ರಿನೀವೆಬಲ್ ಎನರ್ಜಿ ಡಿಪಾರ್ಟ್‌ಮೆಂಟ್ ಮುಖ್ಯಸ್ಥ ರಾಜೇಂದ್ರ ಚಾಂದಗುಡೆ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಬೆಳಗಾವಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ಬಿ.ಎಸ್.ರಾಜಗೋಪಾಲ್, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ತಾಂತ್ರಿಕ ಸಲಹೆಗಾರ ಸಿ.ಬಿ.ಪಾಟೀಲ, ಲಾತೂರ್‌ನ ಮುಜಾವರ ಬಹದೂರಲಿ ಇಬ್ರಾಹಿಂ ಅವರ ತಂಡ ರಚಿಸಿದೆ.
ಕ್ಷೇತ್ರ ಸಹಾಯಕ ಆಯ್ಕೆ, ಕಬ್ಬು ಕಟಾವಿಗೆ ಮುಂಗಡ ಹಣ ಪಾವತಿ, ಕಬ್ಬು ಕಟಾವು ಮತ್ತು ಸಾಗಣೆ, ಕಬ್ಬಿನ ತೂಕ ಮತ್ತು ಹಣ ಪಾವತಿ, ಹೊರಗುತ್ತಿಗೆ ನೌಕರರ ನೇಮಕಾತಿ, ಸಕ್ಕರೆ ಮಾರಾಟ, ಕಾರ್ಖಾನೆ ಆವರಣದಲ್ಲಿನ ಮರಗಳ ಕಟಾವು, ಕಾಮಗಾರಿಗಳ ನಿರ್ವಹಣೆ, ನಿವೃತ್ತ ಮತ್ತು ಸ್ವಯಂನಿವೃತ್ತಿ ಪಡೆದ ನೌಕರರ ನೇಮಕ, ಕರ್ತವ್ಯನಿರ್ಲಕ್ಷ್ಯ, ಕಂಪನಿಯ ಖಾಲಿ ಜಾಗದ ಗುತ್ತಿಗೆಯಂತಹ ನಿಯಮಬಾಹೀರ ಚಟುವಟಿಕೆಗಳಿಂದ ಕಂಪನಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಈ ಆರೋಪಗಳ ಕುರಿತಂತೆ ಮತ್ತು ನಿಯಮಬಾಹೀರವಾಗಿ ಸಭಾ ನಡಾವಳಿಗೆ ಸಹಿ ಹಾಕಿರುವುದು, ತನಿಖಾ ಸಮಿತಿ ರಚಿಸಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಂಪನಿಗೆ ಆಗಿರುವ ನಷ್ಟವನ್ನು ವಸೂಲು ಮಾಡುವಂತೆ ಸರ್ಕಾರಕ್ಕೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ತನಿಖಾ ಸಮಿತಿ ರಚಿಸಿದೆ.
ಹೊರಗುತ್ತಿಗೆ ನೇಮಕಾತಿ ಮಾಡುವಾಗ ಮೀಸಲಾತಿ ನಿಯಮಗಳ ಉಲ್ಲಂಘನೆ, 2023-24ನೇ ಸಾಲಿನಲ್ಲಿ ಕಾರ್ಖಾನೆಯ ಸಕ್ಕರೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿರುವುದು, ಕೋಣನಹಳ್ಳಿ ಕೆರೆಯಿಂದ ಕಾರ್ಖಾನೆಗೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಿರುವ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು, ಮೈಷುಗರ್ ಕಂಪನಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಗುತ್ತಿಗೆ ನೀಡಿ ಕಾರ್ಖಾನೆಗೆ ತುಂಬಲಾರದ ನಷ್ಟ ಉಂಟು ಮಾಡಿರುವುದು ಸೇರಿದಂತೆ ಇತರ ಅವ್ಯವಹಾರ ಮತ್ತು ನಿಯಮಬಾಹೀರ ಚಟುವಟಿಕೆಗಳಿಂದ ಕಾರ್ಖಾನೆಗೆ ಉಂಟಾಗಿರುವ ನಷ್ಟದ ಕುರಿತಂತೆ ಪರಿಶೀಲಿಸಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ಸಮಿತಿಯು ಕಾರ್ಖಾನೆಗೆ ಭೇಟಿ ನೀಡಿ ಪ್ರತಿ ದೂರುಗಳ ಕುರಿತು ಪರಿಶೀಲನೆ ನಡೆಸಿ 15 ದಿನದೊಳಗೆ ವರದಿ ಸಲ್ಲಿಸಬೇಕು. ಸಮಿತಿಗೆ ಅಗತ್ಯ ದಾಖಲೆ, ಮಾಹಿತಿಗಳನ್ನು ಒದಗಿಸಿ ಸ್ಥಳಾವಕಾಶ ಹಾಗೂ ಅಗತ್ಯ ಸಿಬ್ಬಂದಿ ಒದಗಿಸುವುದು. ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಪ್ರಯಾಣ, ವಸತಿಗೆ ಕಂಪನಿಯಿಂದಲೇ ವ್ಯವಸ್ಥೆ ಮಾಡುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಕ್ಕರೆ) ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಾರಾಮ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net