ಏ.8ರವರೆಗೆ ಅಭಿಯಾನ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಾ.8ರಿಂದ ಏ.8ರವರೆಗೆ ವಿಶೇಷ ಅಭಿಯಾನ ನಡೆಯಲಿದೆ. ಈ ವೇಳೆ ಮುಟ್ಟಿನ ಕಪ್ ಬಗ್ಗೆ ಮಹಿಳೆಯರಿಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಆನ್‌ಲೈನ್ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ವೈಯಕ್ತಿಕ ಸ್ವಚ್ಛತೆ, ಶುಚಿತ್ವ, ಆರೋಗ್ಯಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ 18 ರಿಂದ 35 ವಯಸ್ಸಿನೊಳಗಿನ ಗುಂಪು ರಚಿಸಿ ಋತು ಚಕ್ರ, ನೈರ್ಮಲ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಬೇಕು. ಅಂತೆಯೇ 35 ರಿಂದ 45 ವಯಸ್ಸಿನೊಳಗಿನ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಿಸುವುದರ ಜತೆಗೆ ಇದರ ಬಳಕೆಯ ಕುರಿತು ತಜ್ಞ ವೈದ್ಯರಿಂದ ಮಾಹಿತಿ ಕೊಡಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 17 ಗ್ರಾಮ ಪಂಚಾಯಿತಿ ಆಯ್ಕೆ ಮಾಡಲಾಗಿದ್ದು, ಆ ವ್ಯಾಪ್ತಿಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿಯರು, ಬಿಸಿಯೂಟ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಸ್ವ-ಸಹಾಯ ಸಂಘದ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಿಸಿ ಪ್ಯಾಡ್ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸುವಂತೆ ಕ್ರಮ ಕೈಗೊಳ್ಳಬೇಕು. ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಕೆಲಸ ನಿರ್ವಹಿಸಬೇಕು. ಜತೆಗೆ ಲಿಂಗತ್ವ ದೌರ್ಜನ್ಯ ತಡೆಯುವ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕ ಸುಂದರ್‌ರಾಜ್, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ಡಾ.ಶಿಲ್ಪಾ, ಡಾ.ಬೆಟ್ಟಸ್ವಾಮಿ ಇತರರಿದ್ದರು.