ದೈಹಿಕ ಚಟುವಟಿಕೆಗಳಿಲ್ಲದಿರುವುದೇ ರೋಗಕ್ಕೆ ಮೂಲ: ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎಂ.ಶ್ವೇತಾ ಹೇಳಿಕೆ

ಮಂಡ್ಯ ನಗರದ ಬಾಲಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ನಿರ್ದೇಶಕಿ ಕುಮಾರಿ ಎಂ.ಸಿ.ಲತಾ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ವೈ.ಕೆ.ರತ್ನಮ್ಮ ಅವರನ್ನು ಅಭಿನಂದಿಸಲಾಯಿತು.
ಮಂಡ್ಯ ನಗರದ ಬಾಲಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ನಿರ್ದೇಶಕಿ ಕುಮಾರಿ ಎಂ.ಸಿ.ಲತಾ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ವೈ.ಕೆ.ರತ್ನಮ್ಮ ಅವರನ್ನು ಅಭಿನಂದಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಯುವ ಪರಿಷತ್, ಜ್ಞಾನ ಸ್ಪರ್ಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
  • ನಗರದ ಬಾಲಭವನದಲ್ಲಿ ಆಯೋಜನೆ
ಮಂಡ್ಯ: ಪ್ರಸ್ತುತ ದಿನಗಳಲ್ಲಿ ದೈಹಿಕ ಚಟುವಟಿಕೆ ಇಲ್ಲದೆ ಜೀವನವೇ ಹಲವು ರೋಗಗಳಿಗೆ ಮೂಲವಾಗಿದೆ ಎಂದು ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎಂ.ಶ್ವೇತಾ ತಿಳಿಸಿದರು.
ನಗರದ ಬಾಲಭವನದಲ್ಲಿ ಜಿಲ್ಲಾ ಯುವ ಪರಿಷತ್, ಜ್ಞಾನ ಸ್ಪರ್ಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್, ಕೌಶಲ ಯುವತಿ ಮತ್ತು ಮಹಿಳಾ ಮಂಡಳಿ ಹೊಸಹಳ್ಳಿ ಮಂಡ್ಯ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಅಭಿನಂದನೆ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನಿಯಮಿತ ಮುಟ್ಟು, ಸಂತಾನ ಹೀನತೆ, ಫಲವತ್ತತೆ ಕುಸಿತಕ್ಕೂ ಆಟೋಟಗಳಿಲ್ಲದೆ ಜಡ ಜೀವನವೇ ಕಾರಣ. ಇದರೊಂದಿಗೆ ಇಂದಿನ ಯುವ ಜನರು ಫಾಸ್ಟ್‌ಫುಡ್ ಕಡೆ ಮುಖ ಮಾಡಿರುವುದು ಬೊಜ್ಜು ಹೆಚ್ಚಾಗಲು ಕಾರಣವಾಗಿದೆ. ಹಾಗಾಗಿ ಉತ್ತಮ ಜೀವನ ಶೈಲಿ, ಮನೆಯೂಟವನ್ನೇ ತಿನ್ನುವ ಪರಿಪಾಠ ಅಳವಡಿಸಿಕೊಂಡರೆ ಹಲವು ರೋಗಗಳಿಂದ ದೂರವಿರಬಹುದು ಎಂದರು.
ಇಂದಿನ ಮಕ್ಕಳು ಮೊಬೈಲ್‌ಗಳಿಗೆ ದಾಸರಾಗುತ್ತಿರುವ ಆತಂಕಕಾರಿ ವಿಚಾರವಾಗಿದೆ. ಮೊಬೈಲ್ ಮಕ್ಕಳ ಸೃಜನಶೀಲತೆೆಯನ್ನು ಹಾಳು ಮಾಡುತ್ತಿದೆ. ಮಕ್ಕಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಕಡೆ ಮುಖ ಮಾಡಲು ಕಾರಣವಾಗಿದೆ. ಆದ್ದರಿಂದ ಪಾಲಕರು ಮಕ್ಕಳನ್ನು ಒಳ್ಳೆಯ ಹವ್ಯಾಸಗಳಲ್ಲಿ ತೊಡಗಿಸಬೇಕು ಎಂದು ಸಲಹೆ ನೀಡಿದರು.
ಕೌಶಲ ಯುವತಿ ಮತ್ತು ಮಹಿಳಾ ಮಂಡಳಿ ಕಾರ್ಯದರ್ಶಿ ಅರುಣ ಕೆಂಪರಾಜು ಮಾತನಾಡಿ, ನಮ್ಮ ಸಂಸ್ಥೆ 18 ವರ್ಷಗಳಿಂದ ಉಳಿತಾಯ, ಸಾಮಾಜಿಕ ಭೋಜನ, ಮನೋರಂಜನೆ, ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ, ಅಲ್ಲದೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕ ಸಹಾಯ ಮಾಡುತ್ತಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ನಾಗರೇವಕ್ಕ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ಮಂಜುಳಾ, ವಿಜಯಾ ನಾಗಣ್ಣ, ಮಹಿಳಾ ಮುನ್ನಡೆ ಶಿಲ್ಪಾ, ಜಿಲ್ಲಾ ಯುವ ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಂಕೇಶ್, ಕರ್ನಾಟಕ ಜನಶಕ್ತಿ ಕಾರ್ಯದರ್ಶಿ ಸಿದ್ದರಾಜು, ಇಂಜಿನಿಯರ್ ಜಿ.ಎನ್.ಕೆಂಪರಾಜು ಇತರರಿದ್ದರು.
ಇದೇ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ನಿರ್ದೇಶಕಿ ಕುಮಾರಿ ಎಂ.ಸಿ.ಲತಾ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ವೈ.ಕೆ.ರತ್ನಮ್ಮ ಅವರನ್ನು ಉಪನ್ಯಾಸಕಿ ಡಾ.ಎಂ.ಎಸ್.ಅನಿತಾ ಅಭಿನಂದಿಸಿದರು. ವೈದ್ಯಕೀಯ ವಿದ್ಯಾರ್ಥಿನಿ ನಂದಿತಾ ಅವರನ್ನು ಅಭಿನಂದಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net