ಭ್ರೂಣ ಹತ್ಯೆಯಿಂದ ಲಿಂಗಾನುಪಾತದಲ್ಲಿ ವ್ಯತ್ಯಾಸ: ಕಸಾಪ ಮಾಜಿ ಕೋಶಾಧ್ಯಕ್ಷ ಕೃಷ್ಣೇಗೌಡ ಆತಂಕ

ಮಂಡ್ಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
  • ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇದಕ್ಕೆ ಮೂಲ ಕಾರಣ ಹೆಣ್ಣುಭ್ರೂಣ ಹತ್ಯೆ. ಇಂತಹ ಹೀನ ಕೃತ್ಯದಿಂದಾಗಿ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗಿದೆ. ಹೆಣ್ಣಿಗೆ ಹೆಣ್ಣೇ ಶತ್ರುವಾದಾಗ ಇಂತಹ ಸಾಮಾಜಿಕ ಸಮಸ್ಯೆ ಉಂಟಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಾಜಿ ಕೋಶಾಧ್ಯಕ್ಷ ಡಾ.ಕೃಷ್ಣೇಗೌಡ ಹುಸ್ಕೂರು ಅಭಿಪ್ರಾಯಪಟ್ಟರು.
ನಗರದ ಕಲ್ಲಹಳ್ಳಿಯಲ್ಲಿರುವ ಗ್ಲೋಬಲ್ ಮಹೇಶ್ ಪಿಯು ಕಾಲೇಜು ಸಭಾಂಗಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಅಭಿನಂದನೆ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣ, ಆಸ್ತಿ ಹಕ್ಕು, ಆರ್ಥಿಕ ಉದ್ಯೋಗ ನಿಷೇಧಗೊಳಿಸಿದ್ದ ಕಾಲವೊಂದಿತ್ತು. ಆದರೆ 19ನೇ ಶತಮಾನದಿಂದ 21ನೇ ಶತಮಾನದಲ್ಲಿನ ಬೆಳೆವಣಿಗೆ ಮಹತ್ವದ್ದಾಗಿದೆ. ಈಗ ಅಡುಗೆ ಮನೆಯಿಂದ ಹಿಡಿದು ಆಕಾಶದಲ್ಲಿ ಹಾರಾಡುವವವರೆಗೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟಕಿ ಸಿ.ಜೆ.ಸುಜಾತಾ ಕೃಷ್ಣ ಸೇರಿದಂತೆ ಹಲವರಿಗೆ ಪ್ರಶಸ್ತಿಗಳು ಲಭಿಸಲಿ. ಈ ಮೂಲಕ ಸಾಧನೆ ಮಾಡುವವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಹಾರೈಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಮಹಿಳಾಧ್ಯಕ್ಷೆ ಸಿ.ಜೆ.ಸುಜಾತಾಕೃಷ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಾದರೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಶೀಘ್ರ ಶಿಕ್ಷೆಯ ಅವಶ್ಯಕತೆಯಿದೆ. 21ನೇ ಶತಮಾನದಲ್ಲಿರುವ ನಾವು ಮಹಿಳೆಯರ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ. ಆದರೆ, ಇದೇ ಸಮಯದಲ್ಲಿ ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅನಿವಾರ್ಯತೆ ಇದೆ. ಮಹಿಳಾ ದಿನಾಚರಣೆಯ ನಿಜವಾದ ಅರ್ಥ, ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಿಕೊಡುವುದಾಗಿದೆ ಎಂದು ನುಡಿದರು.
ಮಹಿಳಾ ದೌರ್ಜನ್ಯಗಳಲ್ಲಿ, ವಿಶೇಷವಾಗಿ ಅತ್ಯಾಚಾರ ಮತ್ತು ದೈಹಿಕ ಹಲ್ಲೆ ಪ್ರಕರಣಗಳಲ್ಲಿ ನ್ಯಾಯ ಸಿಗಲು ವರ್ಷಗಟ್ಟಲೆ ಕಾಯಬೇಕಿದೆ. ವಿಳಂಬವಾದ ನ್ಯಾಯವು ನ್ಯಾಯ ನಿರಾಕರಣೆಗೆ ಸಮಾನ. ಅಪರಾಧಿಗಳಿಗೆ ಶಿಕ್ಷೆಯಾಗುವಲ್ಲಿ ವಿಳಂಬವಾದರೆ, ಅವರಲ್ಲಿ ಕಾನೂನಿನ ಭಯ ಕಡಿಮೆಯಾಗಿ ಇಂತಹ ಸಮಾಜ ಘಾತುಕ ಕೃತ್ಯಗಳು ಮರುಕಳಿಸುತ್ತವೆ ಎಂದು ಎಚ್ಚರಿಸಿದ ಅವರು, ಶೀಘ್ರ ವಿಚಾರಣೆ ನಡೆದು ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ವಿಚಾರಣೆ ನಡೆಸಿ ಕೆಲವೇ ತಿಂಗಳುಗಳಲ್ಲಿ ಅಂತಿಮ ತೀರ್ಪು ನೀಡಿ ತಪ್ಪಿತಸ್ಥರಿಗೆ ಗಲ್ಲು, ಜೀವಾವಧಿ, ಕೋಟ್ಯಂತರ ರೂ ಪರಿಹಾರ, ದಂಢ ವಿದಿಸಿದರೆ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣವಾಗುತ್ತದೆ ಎಂದು ಸಲಹೆ ನೀಡಿದರು.
ಕೇವಲ ಕಾನೂನಿನಿಂದ ಮಾತ್ರ ದೌರ್ಜನ್ಯವನ್ನು ತಡೆಯಲು ಸಾಧ್ಯವಿಲ್ಲ. ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಬಾಲ್ಯದಿಂದಲೇ ಹೆಣ್ಣು ಮಕ್ಕಳಿಗೆ ಗೌರವ ನೀಡುವುದನ್ನು ಮಕ್ಕಳಿಗೆ ಕಲಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಪುರುಷರೂ ಕೂಡ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.
ಗ್ಲೋಬಲ್ ಮಹೇಶ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಅಶ್ವಿನಿ ಯೋಗಾನಂದ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶುಭದಾಯಿನಿ, ಒಕ್ಕಲಿಗರ ಸಂಘ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ ಕಲ್ಲಹಳ್ಳಿ, ಕಾಂಗ್ರೆಸ್ ಪ್ರಚಾರ ಸಮಿತಿ ನಗರಾಧ್ಯಕ್ಷ ಅಭಿಲಾಷ್, ಸರಸ್ವತಿ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net