ಕೃಷಿಕ ಅಲಯನ್ಸ್ ಸಂಸ್ಥೆ, ಮಾಂಡವ್ಯ ಅಲಯನ್ಸ್ ಸಂಸ್ಥೆ, ದ್ವಾರಕಾ ಅಲಯನ್ಸ್ ಸಂಸ್ಥೆಯಿಂದ ಆಯೋಜನೆ
ಮಂಡ್ಯ:ಭಾರತದಲ್ಲಿ ಈಗ ಸುಮಾರು 37 ಕೋಟಿ ಜನ ಮಾದಕ ವ್ಯಸನಿಗಳಿದ್ದಾರೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿ(ಮಾಜಿ ಪುರಸಭೆ)ನಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಮಾಂಡವ್ಯ ಅಲಯನ್ಸ್ ಸಂಸ್ಥೆ, ದ್ವಾರಕಾ ಅಲಯನ್ಸ್ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಮಾದಕ ವಸ್ತು ಸಮಸ್ಯೆ: ಮುಂದುವರಿದ ಸಮಸ್ತೆಗಳು ನವೀನ ಪ್ರತಿಕ್ರಿಯೆಗಳು ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಉದ್ಘಾಟಿಸಿ ಮಾತನಾಡಿದರು.
ವಾರ್ಷಿಕ ಸುಮಾರು 9 ಕೋಟಿ ಜನ ಮಾದಕ ವ್ಯಸನಿಗಳು ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ 2.5 ಲಕ್ಷ ಕೋಟಿ ರೂ., ವ್ಯವಹಾರ ನಡೆಯುತ್ತಿದೆ. ಕರ್ನಾಟಕದ ಬಜೆಟ್ 3 ಲಕ್ಷ ಕೋಟಿ ರೂ.,ನಷ್ಟು ದೇಶದಲ್ಲಿ ಮಾದಕ ವಸ್ತುಗಳ ಮಾರಾಟ ವ್ಯವಹಾರ ನಡೆಯುತ್ತಿದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಸುಮಾರು 15 ಸಾವಿರ ಕೋಟಿ ರೂ.ನಷ್ಟು ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದೆ. ಡ್ರಗ್ಸ್, ಗಾಂಜಾ, ಅಫೀಮು, ಮತ್ತುಬರುವಂತಹ ವಸ್ತುಗಳು, ದ್ಯವ್ಯಗಳು ಎಗ್ಗಿಲ್ಲದೆ ನಡೆಯುತ್ತದೆ. ಇದು ಅಪಾಯಕಾರಿ ಬೆಳೆವಣಿಗೆಯಾಗಿದೆ. ಜಿಲ್ಲೆಯಲ್ಲೂ ಗಾಂಜಾ, ಮಾದಕವಸ್ತುಗಳ ಮಾರಾಜ ಜಾಲವಿದೆ. ಇದನ್ನು ಪೊಲೀಸರು ಭೇದಿಸಿದ್ದಾರೆ. ಮಾದಕ ವಸ್ತುಗಳ ಬಳಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು. ಅವರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯ. ಒಂದು ಬಾರಿ ಮಾದಕ ವಸ್ತುಗಳ ಸೇವನೆಗೆ ದಾಸರಾದರೆ ಮುಗಿಯಿತು. ಸದಾ ಅದನ್ನೇ ಬೇಡುತ್ತದೆ. ಯುವಕರನ್ನೇ ಹೆಚ್ಚು ಟಾರ್ಗೆಟ್ ಮಾಡಿ ಉಚಿತವಾಗಿ ನೀಡಿ ನಂತರ ಹಣ ಪಡೆದು ಕೊಂಡುಕೊಳ್ಳುವಂತೆ ಮಾಡುತ್ತಾರೆ. ಆದ್ದರಿಂದ ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಮಾತನಾಡಿ, ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದೆ ಎನ್ನುವುದನ್ನ ಮರಿಯಬೇಡಿ. ಕುಷ್ಟ ರೋಗದ ಲಕ್ಷಣಗಳು ಮತ್ತು ಏಡ್ಸ್ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣವೇ ಉಚಿತ ಚಿಕಿತ್ಸೆ ನೀಡಿದರೆ ಆರೋಗ್ಯ ರಕ್ಷಿಸಿಕೊಳ್ಳಬಹುದು. ಬೀಡಿ, ಸಿಗರೇಟ್, ಮಾದಕ ವಸ್ತುಗಳ ಸೇವನೆ ಬಳಕೆಯಿಂದ ಚಿಕ್ಕ ವಯಸ್ಸಿಗೆ ಹೃದಯಾಘಾತ, ಕ್ಷಯ ರೋಗ ಹೆಚ್ಚಾಗುತ್ತಿದೆ. ಒಂದು ವಾರ ಜ್ವರ, ಎರಡು ವಾರ ಕೆಮ್ಮಿದ್ದರೆ ಕ್ಷಯ ರೋಗಗಳ ಲಕ್ಷಣವಾಗಿರಬಹುದು ಎಂದು ಮಾಹಿತಿ ನೀಡಿದರು.
ಡಿಡಿಪಿಯು ಪ್ರಸನ್ನಕುಮಾರ್, ಪ್ರಾಂಶುಪಾಲ ಗುರುಲಿಂಗೇಗೌಡ, ತಂಬಾಕು ಕೋಶದ ಅಧಿಕಾರಿ ತಿಮ್ಮರಾಜು, ಮಾಂಡವ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಶಿವಕುಮಾರ್, ದ್ವಾರಕ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಪವಿತ್ರಾ ನಾಗರಾಜ್, ದರಸಗುಪ್ಪೆ ಧನಂಜಯ್, ಪ್ರೊ.ಡೇವಿಡ್ ಇತರರಿದ್ದರು.
ಇದೇ ಸಂದರ್ಭದಲ್ಲಿ ನಗರಸಭೆ ಆವರಣದಲ್ಲಿ ಜಮಾವಣೆಗೊಂಡ ಸಂಘಟಕರು ಮತ್ತು ವಿದ್ಯಾರ್ಥಿಗಳು, ಮಾದಕ ವಸ್ತುಗಳ ಬಳಕೆ ವಿರುದ್ದ ಘೋಷಣೆ ಕೂಗಿದರು. ಜತೆಗೆ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.