ಕಾರ್ಮಿಕರಿಗೆ ಸ್ಕ್ರೀನಿಂಗ್ ಪರೀಕ್ಷೆ ಕಡ್ಡಾಯ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ಮಂಡ್ಯದಲ್ಲಿ ಆಯೋಜಿಸಿದ್ದ ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ 2017 ರಿಂದ 2026ರವರೆಗೆ ಮಲೇರಿಯಾ ಪ್ರಕರಣಗಳು ವರದಿಯಾಗಿಲ್ಲ
  • ವಲಸೆ ಬಂದ ಕಾರ್ಮಿಕರಿಂದ ಮಲೇರಿಯಾ ಪ್ರಕರಣಗಳು ಕಂಡುಬಂದಿದೆ
  • ನಗರದಲ್ಲಿ ಅಂತರ್ ಇಲಾಖಾ ಸಮನ್ವಯ ಸಭೆ
ಮಂಡ್ಯ: ಜಿಲ್ಲೆಯಲ್ಲಿ 2017 ರಿಂದ 2026ರವರೆಗೆ ಸ್ಥಳೀಯವಾಗಿ ಮಲೇರಿಯಾ ಪ್ರಕರಣಗಳು ವರದಿಯಾಗಿರುವುದಿಲ್ಲ. ಆದರೆ ಹೊರ ರಾಜ್ಯದಿಂದ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡಲು ವಲಸೆ ಬಂದ ಕಾರ್ಮಿಕರಿಂದ ಮಲೇರಿಯಾ ಪ್ರಕರಣಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೆಲಸ ನಿಮಿತ್ತ ಜಿಲ್ಲೆಗೆ ಬರುವ ಕಾರ್ಮಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್(ರಕ್ತ ತಪಾಸಣೆ) ಮಾಡಲು ವೈದ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಮಲೇರಿಯಾ ನಿಯಂತ್ರಣ ಕುರಿತು ಅಂತರ್ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಗಾರು ಮಳೆಯ ಸಮಯದಲ್ಲಿ ಡೆಂೆ ಮತ್ತು ಮಲೇರಿಯಾ ನಂತಹ ಸೊಳ್ಳೆಗಳಿಂದ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದರು.
ಗ್ರಾಮೀಣ ಮತ್ತು ನಗರ ಭಾಗದ ಜನರಲ್ಲಿ ಮಲೇರಿಯಾ ಕುರಿತು ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಆಂದೋಲನಗಳನ್ನು ಹಮ್ಮಿಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯ ಹಾಗೂ ಬಿಸಿಎಂ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಉತ್ತಮ ಆರೋಗ್ಯ ದೃಷ್ಟಿಯಿಂದ ಸೊಳ್ಳೆ ನಿರೋಧಕ ಜಾಲರಿಗಳು ಹಾಗೂ ಸೊಳ್ಳೆ ಪರದೆ ಅಳವಡಿಸಬೇಕು. ಕಾರ್ಖಾನೆ ಆವರಣದಲ್ಲಿರುವ ನೀರಿನ ತೊಟ್ಟಿ, ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು. ಲಾರ್ವಾಗಳನ್ನು ನಾಶಪಡಿಸಲು ಕೀಟನಾಶಕಗಳನ್ನು ಸಿಂಪಡಿಸಬೇಕು. ಕೈಗಾರಿಕೆ ವಲಯಗಳಿಗೆ ವಲಸೆ ಬರುವ ಕಾರ್ಮಿಕರ ಬಗ್ಗೆ ಜಿಲ್ಲಾಮಟ್ಟದ ಆರೋಗ್ಯ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುವುದರ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಕಾಪಾಡುವುದು ಅತ್ಯಗತ್ಯ ಎಂದರು.
ಸಾರಿಗೆ ಇಲಾಖೆಯ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಡಿಪೋಗಳಲ್ಲಿ ನಿರುಪಯುಕ್ತ ಟೈಯರ್ ಹಾಗೂ ಅನುಪಯುಕ್ತ ವಸ್ತುಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಮತ್ತು ಟೈಯರ್‌ಗಳಲ್ಲಿ ನೀರು ಶೇಖರಣೆಯಾಗದಂತೆ ಕ್ರಮ ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿದಾಗ ಡೆಂಘೆ ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಂತರಾಜು, ಸಹಾಯಕ ಯೋಜನಾಧಿಕಾರಿ ಜಿ.ಶ್ರೀಹರ್ಷ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net