ಪ್ರಾಣಿ, ಪಕ್ಷಿ ದಾಹ ತಣಿಸಲು ತೊಟ್ಟಿ ನಿರ್ಮಾಣ: ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್ ಹೇಳಿಕೆ

ಮಂಡ್ಯ ನಗರದ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನದಲ್ಲಿ ಜೈ ಕರ್ನಾಟಕ ಪರಿಷತ್‌ನಿಂದ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರುಣಿಸುವ ನೀರಿನ ತೊಟ್ಟಿ ಅಳವಡಿಸಲಾಯಿತು.
ಮಂಡ್ಯ ನಗರದ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನದಲ್ಲಿ ಜೈ ಕರ್ನಾಟಕ ಪರಿಷತ್‌ನಿಂದ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರುಣಿಸುವ ನೀರಿನ ತೊಟ್ಟಿ ಅಳವಡಿಸಲಾಯಿತು.
Published on
ಮಂಡ್ಯ: ನಗರ ವ್ಯಾಪ್ತಿಯ ಎಲ್ಲ ಉದ್ಯಾನದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ದಾಹ ತಣಿಸಲು ನೀರಿನ ತೊಟ್ಟಿ ನಿರ್ಮಿಸುತ್ತಿದ್ದೇವೆ ಎಂದು ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್ ಹೇಳಿದರು.
ನಗರದ ಸ್ವರ್ಣಸಂದ್ರ ಬಡಾವಣೆಯ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನದಲ್ಲಿ ಜೈ ಕರ್ನಾಟಕ ಪರಿಷತ್ ರಾಜ್ಯ ಮತ್ತು ನಗರ ಶಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಉಳಿಸಿ ಅಭಿಯಾನದಡಿ ನೀರಿನ ತೊಟ್ಟಿ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಸಿಲಿನಿಂದ ಮನುಷ್ಯ ಬೆವರಿನಲ್ಲಿ ತೋಯ್ಯುತ್ತಿದ್ದಾನೆ. ಆದರೆ ಜೀವ ಸಂಕಲಗಳಲ್ಲಿ ನಮ್ಮ ನಡುವೆ ಇರುವ ಪಕ್ಷಿ-ಪ್ರಾಣಿ, ದನಕರುಗಳಿಗೆ ಶುದ್ಧ ಕುಡಿಯುವ ನೀರು ತಕ್ಷಣ ಸಿಗಬೇಕೆಂಬ ಉದ್ದೇಶದಿಂದ ಪ್ರತಿ ಉದ್ಯಾನದಲ್ಲೂ ಶುದ್ಧ ನೀರಿನ ತೊಟ್ಟಿಗಳನ್ನಿಡುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ನುಡಿದರು.
ನಮ್ಮ ಸಂಘಟನೆಯೊಂದಿಗೆ ಹಲವು ಸಂಘ, ಸಂಸ್ಥೆಗಳು ಕೂಡ ಕೈ ಜೋಡಿಸಿವೆ. ಮುಂದಿನ ಎರಡು ವಾರಗಳಲ್ಲಿ ಮಂಡ್ಯ ನಗರಾದ್ಯಂತ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ, ಮುತ್ತತ್ತಿ ಅರಣ್ಯ ವಲಯದಲ್ಲೂ ಪ್ರಾಣಿ-ಪಕ್ಷಿ ಸಂಕುಲಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಬೇಡಿಕೆ ಬಂದಿದ್ದು, ಅಲ್ಲಿಯೂ ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಪರಿಷತ್ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ಏರುತ್ತಿರುವ ಬಿಸಿಲಿನ ತಾಪದಿಂದ ತತ್ತರಿಸುತ್ತಿರುವ ಪ್ರಾಣಿ-ಪಕ್ಷಿಗಳ ಹಿತದೃಷ್ಟಿಯಿಂದ ಜೈ ಕರ್ನಾಟಕ ಪರಿಷತ್ ಅರ್ಥಪೂರ್ಣ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೂಕ ಪ್ರಾಣಿಗಳಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ರಣ ಬಿಸಿಲಿನ ತಾಪದಿಂದ ಪಕ್ಷಿಗಳಿಗೆ ಶುದ್ಧ ನೀರಿನ ಅವಶ್ಯಕತೆ ಇದೆ. ಅವುಗಳ ದಾಹ ತಣಿಸಲು ಸುಮಾರು ಒಂದು ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲದ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಜೈ ಕರ್ನಾಟಕ ಸಂಘಟನೆ ಉಪಾಧ್ಯಕ್ಷ ಜೆ.ಬಸವರಾಜ್, ಶಾಖಾ ಅಧ್ಯಕ್ಷ ಪುಟ್ಟಸ್ವಾಮಿ, ನುಡಿಭಾರತಿ ಸಹಕಾರ ಸಂಘದ ಎ.ಎಲ್. ಬಸವೇಗೌಡ, ಎಂ.ಜೆ.ಯೋಗೇಶ್, ಶಿವಕುಮಾರ್, ಕಿರಣ್‌ಕುಮಾರ್, ಮಂಜುನಾಥ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net