ಮಲ ತ್ಯಾಜ್ಯ ಘಟಕದ ನಿರ್ವಹಣೆಗೆ ಆದ್ಯತೆ ನೀಡಿ: ಜಿ.ಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ಮಳವಳ್ಳಿ ತಾಲೂಕು ಬಿ.ಜಿ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಕ್ಕರಹಳ್ಳಿ ಗ್ರಾಮದಲ್ಲಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕವನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಪರಿಶೀಲಿಸಿದರು.
ಮಳವಳ್ಳಿ ತಾಲೂಕು ಬಿ.ಜಿ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಕ್ಕರಹಳ್ಳಿ ಗ್ರಾಮದಲ್ಲಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕವನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಕ್ಕರಹಳ್ಳಿ ಗ್ರಾಮದಲ್ಲಿ ಪರಿಶೀಲನೆ
  • ಸ್ವಾವಲಂಬಿ ಹಾಗೂ ಪರಿಸರ ಸ್ನೇಹಿಯನ್ನಾಗಿ ಅಭಿವೃದ್ಧಿಪಡಿಸಲು ಸೂಚನೆ

ಮಳವಳ್ಳಿ:

ತಾಲೂಕಿನ ಬಿ.ಜಿ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಕ್ಕರಹಳ್ಳಿ ಗ್ರಾಮದಲ್ಲಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಭೇಟಿ ನೀಡಿ, ಘಟಕದ ಕಾರ್ಯಾಚರಣೆ, ನಿರ್ವಹಣೆ ಹಾಗೂ ಸುಸ್ಥಿರತೆ ಕುರಿತು ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಘಟಕವನ್ನು ಸಮರ್ಪಕವಾಗಿ ಕಾರ್ಯಾಚರಣೆಗೊಳಿಸಿ ಸ್ವಾವಲಂಬಿ ಹಾಗೂ ಪರಿಸರ ಸ್ನೇಹಿಯನ್ನಾಗಿ ಅಭಿವೃದ್ಧಿಪಡಿಸಬೇಕು. ಸುತ್ತಮುತ್ತಲಿನ ಗ್ರಾಪಂನೊಂದಿಗೆ ಸಮನ್ವಯ ಸಾಧಿಸಿ ಮಲ ತ್ಯಾಜ್ಯ ಸಾಗಿಸುವ ವಾಹನಗಳಿಗೆ ಸೂಕ್ತ ಮಾರ್ಗನಕ್ಷೆ ರೂಪಿಸುವ ಮೂಲಕ ಕಾರ್ಯಾಚರಣೆ ವೆಚ್ಚ, ವಿಶೇಷವಾಗಿ ಇಂಧನ ವೆಚ್ಚವನ್ನು ಕಡಿಮೆ ಮಾಡುವಂತೆ ಸೂಚಿಸಿದರು.
ಮಲ ತ್ಯಾಜ್ಯ ಸಾಗಿಸುವ ವಾಹನಗಳ ಮಾಲೀಕರು ಹಾಗೂ ಚಾಲಕರಿಗೆ ತ್ಯಾಜ್ಯ ನಿರ್ವಹಣಾ ನಿಯಮಗಳ ಕುರಿತು ಸೂಕ್ತ ಅರಿವು ಮೂಡಿಸಿ. ಅಂಂತೆಯೇ ಮಲ ತ್ಯಾಜ್ಯವನ್ನು ಘಟಕದಲ್ಲಿಯೇ ವಿಲೇವಾರಿ ಮಾಡುವಂತೆ ಕ್ರಮವಹಿಸಬೇಕು. ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದಲ್ಲಿ ಮೊದಲು ಜಾಗೃತಿ ಹಾಗೂ ನೋಟಿಸ್ ಮೂಲಕ ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ನಿಯಮಾನುಸಾರ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದರು.
ಘಟಕದ ನಿರ್ವಹಣೆಯನ್ನು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಉದ್ಯಮ ಮಾದರಿಯಲ್ಲಿ ಕೈಗೊಳ್ಳುವ ಸಾಧ್ಯತೆ ಪರಿಶೀಲಿಸಬೇಕು. ಪಂಚಾಯಿತಿ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ನಡುವೆ ಸೂಕ್ತ ಒಪ್ಪಂದ ಮಾಡಿಕೊಂಡು ಜವಾಬ್ದಾರಿಯನ್ನು ಸ್ಪಷ್ಟವಾಗಿ ನಿಗದಿಪಡಿಸಬೇಕು. ಘಟಕದಿಂದ ದೊರೆಯುವ ಆದಾಯದಲ್ಲಿ ಮೊದಲ ಆದ್ಯತೆಯನ್ನು ಮೂಲಸೌಕರ್ಯದ ನಿರ್ವಹಣೆ ಹಾಗೂ ಕಾರ್ಯಾಚರಣೆಗೆ ನೀಡಬೇಕು. ನಂತರದ ಹಂತದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಲಾಭ ದೊರೆಯುವ ರೀತಿಯಲ್ಲಿ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.
ಪ್ರತಿ ಹಂತದಲ್ಲಿಯೂ ಪಾರದರ್ಶಕತೆ ಕಾಪಾಡಲು ಆನ್‌ಲೈನ್ ವಹಿವಾಟು, ಸಮರ್ಪಕ ಲೆಕ್ಕಪತ್ರ ನಿರ್ವಹಣೆ ಹಾಗೂ ಕಾರ್ಯಾಚರಣೆಯ ದಾಖಲೀಕರಣಕ್ಕೆ ಆದ್ಯತೆ ನೀಡಬೇಕು. ಘಟಕದ ನಿಯಮಿತ ಸ್ವಚ್ಛತೆ, ಚೇಂಬರ್‌ಗಳ ನಿರ್ವಹಣೆ ಹಾಗೂ ಮೂಲಸೌಕರ್ಯದ ಸಂರಕ್ಷಣೆಯನ್ನು ನಿರಂತರವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಪಂ ಯೋಜನಾ ನಿರ್ದೇಶಕ ಸುಂದರ್‌ರಾಜ್, ಕೆಆರ್‌ಐಡಿಎಲ್ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್, ತಾಪಂ ಇಒ ಶ್ರೀನಿವಾಸ್, ಪಿಡಿಒ ಕೇಶವ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net