ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ತಾಲೂಕು ಕಚೇರಿ ಎದುರು ಮದ್ದೂರು ನಗರದಲ್ಲಿ 46ನೇ ವರ್ಷದ ರೈತ ಹುತಾತ್ಮರ ಸ್ಮರಣೆ ಅಂಗವಾಗಿ ರೈತ ಸಂಘದಿಂದ ಪ್ರತಿಭಟನೆ ನಡೆಯಿತು. ಪ್ರಭುಲಿಂಗು, ಕೀಳಘಟ್ಟ ನಂಜುಂಡಯ್ಯ, ಸೊ.ಸಿ. ಪ್ರಕಾಶ್, ಅಣ್ಣೂರು ಮಹೇಂದ್ರ, ಬೋರಯ್ಯ, ಚಂದ್ರಶೇಖರ್ ಇದ್ದರು.
ಮದ್ದೂರು: ನಗರದಲ್ಲಿ 46ನೇ ವರ್ಷದ ರೈತ ಹುತಾತ್ಮರ ಸ್ಮರಣೆಯನ್ನು ರೈತ ಸಂಘದಿಂದ ಪ್ರೊ.ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಹಮ್ಮಿಕೊಳ್ಳಲಾಗಿತ್ತು. ಬಳಿಕ ರೈತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರದ ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು
.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಭುಲಿಂಗು ಮಾತನಾಡಿ, ನರಗುಂದ, ನವಲಗುಂದ ರೈತ ಬಂಡಾಯ ಹೋರಾಟ ನಡೆದು 46 ವರ್ಷಗಳು ಕಳೆದಿದ್ದು, ಅಂದಿನ ರಾಜ್ಯ ಸರ್ಕಾರವು ರೈತ ಚಳವಳಿಗಳನ್ನು ಹತ್ತಿಕ್ಕಲು ರೈತರ ಮೇಲೆ ಗೋಲಿಬಾರ್ ನಡೆಸಿದ ಪರಿಣಾಮ ರಾಜ್ಯಾದ್ಯಂತ 143 ರೈತರು ಬಲಿಯಾಗಿದ್ದರು. ಆದ್ದರಿಂದ ಇಂದು ರೈತ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ತೀವ್ರ ಬರಗಾಲ ತಲೆದೋರಿದ್ದು, ರಾಜ್ಯ ಸರ್ಕಾರವು ಬರಘೋಷಣೆ ಮಾಡಿ ರೈತರಿಗೆ ಎಕರೆಯೊಂದಕ್ಕೆ 50 ಸಾವಿರ ರೂ. ಪರಿಹಾರ ನೀಡಬೇಕು. ಈ ಹಿನ್ನೆಲೆಯಲ್ಲಿ ರೈತರು ಬ್ಯಾಂಕ್‌ಗಳು, ಸಹಕಾರ ಸಂಘಗಳಿಂದ ಪಡೆದಿರುವ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಅಷ್ಟೇ ಅಲ್ಲದೆ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ತುಂಬಾ ವಿಳಂಬವಾಗುತ್ತಿರುವುದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಶಿವಕುಮಾರ ಬಿರಾದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೊ.ಸಿ.ಪ್ರಕಾಶ್, ಅಣ್ಣೂರು ಮಹೇಂದ್ರ, ಬೋರಯ್ಯ, ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.