ಮಂಡ್ಯ: 2019ರಲ್ಲಿ ಕೊಲೆಯಾದ ಮಹಿಳೆಯೊಬ್ಬಳು ಈಗ ದಿಢೀರ್ ಪ್ರತ್ಯಕ್ಷವಾಗಿದ್ದು, ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡದಿದ್ದರೂ ಎರಡೂವರೆ ವರ್ಷ ಜೈಲುವಾಸ ಅನುಭವಿಸಿದ ನಿರಪರಾಧಿಯ ಅಮಾನವೀಯ ಘಟನೆ ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಿಂದ 2019ರಲ್ಲಿ ನಾಪತ್ತೆಯಾಗಿದ್ದ ಮಂಜು ಇದೀಗ ನಾಗಮಂಗಲದಲ್ಲಿ ಜೀವಂತವಾಗಿ ಪ್ರತ್ಯಕ್ಷವಾಗಿದ್ದಾಳೆ. ಈ ಬೆಳವಣಿಗೆಯಿಂದಾಗಿ ಆಕೆಯ ಮಿಸ್ಸಿಂಗ್ ಕೇಸ್ನಲ್ಲಿ ಕೊಲೆ ಆರೋಪ ಹೊತ್ತು ಎರಡೂವರೆ ವರ್ಷ ಜೈಲಿನಲ್ಲಿದ್ದ ರಾಜೇಶ್‌ಗೆ ನಿಟ್ಟುಸಿರು ಬಿಡುವಂತಾಗಿದೆ. ಯಾವುದೇ ತಪ್ಪು ಮಾಡದ ರಾಜೇಶ್, ಅಂದು ಪ್ರಕರಣ ಕೈಗೆತ್ತಿಕೊಂಡಿದ್ದ ಪೊಲೀಸರು ನೀಡಿದ ಚಿತ್ರಹಿಂಸೆಯಿಂದ ಕೊಲೆಯ ಸಂಪೂರ್ಣ ಹೊಣೆ ಹೊತ್ತುಕೊಂಡಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ.
2019ರಲ್ಲಿ ಮಂಜು ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯ ತಂದೆ ನಾಗರಾಜು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆಯ ವೇಳೆ ಮಂಜು ನಾಪತ್ತೆಯಾಗುವ ಮುನ್ನ ಪಾಂಡವಪುರ ಬಸ್ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಸಿಕ್ಕಿದ್ದ ರಾಜೇಶ್‌ನ ಮೊಬೈಲ್‌ನಿಂದ ಮಂಜು ಕೊನೆಯದಾಗಿ ಕರೆ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಈ ವಿಚಾರದ ಆಧಾರದ ಮೇಲೆ ಎರಡು ವರ್ಷಗಳ ಬಳಿಕ ಪಾಂಡವಪುರದ ರಾಗಿಮುದ್ದನಹಳ್ಳಿ ನಿವಾಸಿ ರಾಜೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಯಿತು.
ಈ ಪ್ರಕರಣದಡಿ ಪೊಲೀಸರು ರಾಜೇಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಖಾಕಿ ವಿಚಾರಣೆ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ, ವಿದ್ಯುತ್ ಶಾಕ್ ನೀಡಿ ಹಾಗೂ ಕುಟುಂಬದವರನ್ನು ಬಂಧಿಸುವುದಾಗಿ ಬೆದರಿಕೆ ಹಾಕಿ, ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿತ್ತು ಎಂದು ರಾಜೇಶ್ ಆರೋಪಿಸಿದ್ದಾರೆ. ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾಕರ್ ಎಂಬುವರಿಂದ ಬೇಜವಬ್ದಾರಿ ತನಿಖೆ ಆಗಿರುವ ಬಗ್ಗೆ ಆರೋಪಿಸಲಾಗಿದೆ.
2021ರಿಂದ ಸುಮಾರು ಎರಡೂವರೆ ವರ್ಷ ಜೈಲಿನಲ್ಲಿದ್ದ ರಾಜೇಶ್, 2024ರ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು. ಇದೀಗ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ರಾಜೇಶ್ ಪರ ವಕೀಲ ನಟೇಶ್ ಅವರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ನಾಗಮಂಗಲದಲ್ಲಿ ಮಂಜುವನ್ನು ಪತ್ತೆಹಚ್ಚಿ, ಅವರನ್ನು ನೇರವಾಗಿ ಭೇಟಿ ಮಾಡಿರುವುದಾಗಿ ಹೇಳಲಾಗಿದೆ.
ನಂತರ ಮಂಜುವನ್ನು ಬಿಂಡಿಗನವಿಲೆ ಪೊಲೀಸರ ವಶಕ್ಕೆ ಒಪ್ಪಿಸಿ, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಇಷ್ಟವಿಲ್ಲದ ಮದುವೆ ಮಾಡಿಸಿದ್ದರಿಂದ ಮನೆ ಬಿಟ್ಟು ಹೋಗಿದ್ದೆ. ಇದೀಗ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದೇನೆ. ನನಗೆ ರಾಜೇಶ್ ಯಾರು ಎಂಬುದೇ ಗೊತ್ತಿಲ್ಲ. ಅವರ ಪರಿಚಯವೂ ಇಲ್ಲ ಎಂದು ಠಾಣೆಯಲ್ಲಿ ಹೇಳಿಕೆ ನೀಡಿದ್ದಾಳೆ.
ಮಂಜು ಜೀವಂತವಾಗಿ ಪತ್ತೆಯಾಗಿರುವುದರಿಂದ ರಾಜೇಶ್ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣದ ತನಿಖೆಗೆ ರೋಚಕ ತಿರುವು ಸಿಕ್ಕಿದೆ. ಅಂದಿನ ತನಿಖೆಯಲ್ಲಿ ನಡೆದಿದ್ದೇನು? ರಾಜೇಶ್ ನೀಡಿದ್ದ ಹೇಳಿಕೆ ಯಾವ ಪರಿಸ್ಥಿತಿಯಲ್ಲಿ ದಾಖಲಾಗಿತ್ತು? ಎಂಬ ಪ್ರಶ್ನೆಗಳಿಗೂ ಈಗ ನ್ಯಾಯವಾದ ಉತ್ತರ ಸಿಗಬೇಕಿದೆ.