ಸೌರಶಕ್ತಿಯ ಬಳಕೆ ಪ್ರಮಾಣ ಹೆಚ್ಚಲಿ

ಪಾಂಡವಪುರ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗೆ ಅಳವಡಿಸಿದ್ದ ಸೋಲಾರ್ ಪಂಪನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು.  ಹಿರೇಮರಳಿ ರಣಜಿತ್, ಬೋರಾಪುರ, ಅರಕನಕೆರೆ, ಕದಲಗೆರೆ ಹಾಗೂ ಕಾಡೇನಹಳ್ಳಿ ಗ್ರಾಮಸ್ಥರು ಇದ್ದರು.
ಪಾಂಡವಪುರ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗೆ ಅಳವಡಿಸಿದ್ದ ಸೋಲಾರ್ ಪಂಪನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಹಿರೇಮರಳಿ ರಣಜಿತ್, ಬೋರಾಪುರ, ಅರಕನಕೆರೆ, ಕದಲಗೆರೆ ಹಾಗೂ ಕಾಡೇನಹಳ್ಳಿ ಗ್ರಾಮಸ್ಥರು ಇದ್ದರು.
Published on
ಪಾಂಡವಪುರ : ಪುಟ್ಟಣ್ಣಯ್ಯ ಫೌಂಡೇಷನ್ ಮತ್ತು ನವೀಕರಿಸಬಹುದಾದ ಇಂಧನ ವಲಯದ ಪ್ರಮುಖ ಸಂಸ್ಥೆಯಾದ ಸೆಲ್ಕೋ ಫೌಂಡೇಷನ್ ಸಹಯೋಗದೊಂದಿಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಗ್ರಾಮಗಳ ಕೊಳವೆ ಬಾವಿಗಳಿಗೆ ಸೋಲಾರ್ ಪಂಪ್ ಅಳವಡಿಕೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಚಾಲನೆ ನೀಡಿದರು.
ತಾಲೂಕಿನ ಬೋರಾಪುರ, ಕದಲಗೆರೆ ಮತ್ತು ಅರಕನಕೆರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗೆ ಅಳವಡಿಕೆ ಮಾಡಿದ್ದ ಸೋಲಾರ್ ಪಂಪ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಪ್ರಾಯೋಗಿಕವಾಗಿ ಈ ಗ್ರಾಮಗಳಲ್ಲಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಲ್ಲಿ ಈ ಕಾರ್ಯ ಮಾಡಲಾಗುವುದು. ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸಬೇಕು. ಈ ಯೋಜನೆಗೆ ಸರ್ಕಾರದಿಂದ ಅನುದಾನ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸೋಲಾರ್ ಪಂಪ್‌ಗಳ ಅಳವಡಿಕೆಯಿಂದಾಗಿ ಗ್ರಾಮಸ್ಥರಿಗೆ ನಿರಂತರವಾಗಿ, ವಿದ್ಯುತ್ ಕಡಿತ ಅಥವಾ ಲೋಡ್ ಶೆಡ್ಡಿಂಗ್ ಆತಂಕವಿಲ್ಲದೆ ಶುದ್ಧ ಕುಡಿಯುವ ನೀರು ಸಿಗಲಿದೆ. ಜತೆಗೆ ಗ್ರಾಮ ಪಂಚಾಯಿತಿಗಳ ವಿದ್ಯುತ್ ಬಿಲ್ ಹೊರೆಯೂ ಗಣನೀಯವಾಗಿ ಕಡಿಮೆಯಾಗಲಿದೆ. ಇದೊಂದು ಸಂಪೂರ್ಣ ಪರಿಸರಸ್ನೇಹಿ ಮತ್ತು ಆರ್ಥಿಕ ಸ್ವಾವಲಂಬನೆಯ ಯೋಜನೆಯಾಗಿದೆ ಎಂದರು.
ಈ ವೇಳೆ ಪುಟ್ಟಣ್ಣಯ್ಯ ಫೌಂಡೇಷನ್ ಸಿಇಒ ಹಿರೇಮರಳಿ ರಣಜಿತ್, ಬೋರಾಪುರ, ಅರಕನಕೆರೆ, ಕದಲಗೆರೆ ಹಾಗೂ ಕಾಡೇನಹಳ್ಳಿ ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net