ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದ ಮುಜರಾಯಿ ದೇಗುಲವಾದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿ ಎಣಿಕೆ ಇತ್ತೀಚೆಗೆ ನಡೆಯಿತು.
ಮುಜರಾಯಿ ಇಲಾಖೆ ಅಧಿಕಾರಿಯಾದ ತಹಸೀಲ್ದಾರ್ ಎಸ್.ಯು. ಅಶೋಕ್ ಮಾರ್ಗದರ್ಶನದಂತೆ ಉಪತಹಸೀಲ್ದಾರ್ ವೀಣಾ ಅವರ ನೇತೃತ್ವದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ದೇಗುಲದ ಆವರಣದಲ್ಲಿ ಜರುಗಿತು.
ಎರಡು ದೇಗುಲಗಳಿಂದ 4,80,025ರೂ. ಕಾಣಿಕೆ ಸಂಗ್ರಹವಾಗಿದ್ದು, ಬೆಳ್ಳಿ ಲೇಪನದ ನಾಗರಸೆಡೆ, ತೊಟ್ಟಿಲುವಿನಂತಹ ವಸ್ತುಗಳನ್ನು ಹರಕೆ ರೂಪದಲ್ಲಿ ಭಕ್ತರು ದೇವರಿಗೆ ಅರ್ಪಿಸಿದ್ದರು.
ದೇಗುಲಗಳಲ್ಲಿದ್ದ 16ಹುಂಡಿಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ಎಣಿಕೆ ಮಾಡಲಾಯಿತು.
ಕಾಣಿಕೆ ಹಣವನ್ನು ಕೆ.ಆರ್. ಪೇಟೆ ಬ್ಯಾಂಕ್ ಆಫ್ ಬರೋಡಾದ ದೇಗುಲದ ಮುಜರಾಯಿ ಖಾತೆಗೆ ಜಮಾವಣೆ ಮಾಡಲಾಯಿತು ಎಂದು ಮುಜರಾಯಿ ಅಧಿಕಾರಿಗಳು ಮಾಹಿತಿ ನೀಡಿದರು.
ರಾಜಸ್ವ ನಿರೀಕ್ಷಕ ಡಿ.ಆರ್. ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಪ್ರಸನ್ನ, ತಿಪ್ಪೇಶ್, ಸುನೀಲ್‌ಗಾಣಿಗೇರ್, ಗ್ರಾಮ ಸಹಾಯಕರು, ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ, ಗ್ರಾಮ ಮುಖಂಡರು ಇದ್ದರು.