ತಾಂತ್ರಿಕತೆಯ ವೇಗದಲ್ಲಿ ಮಾನವೀಯತೆ ಮರೆಯಾಗುತ್ತಿದೆ

ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಅವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ಎಚ್.ಡಿ.ಕುಮಾರಸ್ವಾಮಿ, ಎನ್.ಚಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ ಸೇರಿದಂತೆ ಮತ್ತಿತರರಿದ್ದರು.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಅವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ಎಚ್.ಡಿ.ಕುಮಾರಸ್ವಾಮಿ, ಎನ್.ಚಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ ಸೇರಿದಂತೆ ಮತ್ತಿತರರಿದ್ದರು.
Published on

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ

ನಾಗಮಂಗಲ: ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆದಂತೆಲ್ಲ ಜ್ಞಾನದ ಕೊರತೆಯಿಂದಾಗಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ. ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮೂರು ಕೂಡ ಸಮತೋಲನವಾಗಿದ್ದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಅವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ‘ವಿಜ್ಞಾತಂ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿ, ವಿಶ್ವಮಟ್ಟದಲ್ಲಿ ತಾಂತ್ರಿಕತೆ ಬಹಳ ವೇಗವಾಗಿ ಬೆಳೆಯುತ್ತಿದೆ. ದೆಹಲಿಯಂತಹ ನಗರಗಳಲ್ಲಿನ ಒಂದು ವರ್ಗ ಪ್ರಪಂಚದ ವೇಗಕ್ಕೆ ಹೊಂದಿಕೊಂಡಂತೆ ವೇಗವಾಗಿದೆ ಆದರೆ ಹಳ್ಳಿಗಳಿಗೆ ಬಂದು ನೋಡಿದರೆ ದೇಶ ಇನ್ನು ಇಷ್ಟೊಂದು ಹಿಂದೆ ಉಳಿದಿದೆಯೇ ಎನ್ನುವಂತಿದೆ ನಮ್ಮ ದೇಶದ ಪರಿಸ್ಥಿತಿ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದರು ಕೂಡ ಜ್ಞಾನದ ಅರಿವಿರಬೇಕು. ಅದನ್ನು ದುರುಪಯೋಗಿಸಿಕೊಳ್ಳುವುದಕ್ಕಿಂತ ಉಪಯೋಗಿಸಿಕೊಳ್ಳುವ ಅರಿವು ಇರಬೇಕು. ಪ್ರತಿನಿತ್ಯ ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸುವುದು ಒಳ್ಳೆಯದು. ಇದರಿಂದ ಧೈರ್ಯ, ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಿದಂತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಟಿವಿಗಳಲ್ಲಿ ಒಳ್ಳೆಯ ವಿಷಯಗಳನ್ನು ನಾವು ನೋಡಲು ಸಾಧ್ಯವಿಲ್ಲ. ತಂದೆಯೇ ಮಕ್ಕಳನ್ನು ಸಾಯಿಸುತ್ತಿದ್ದಾರೆ. ಮಕ್ಕಳು ತಂದೆಯನ್ನು ಸಾಯಿಸುತ್ತಿದ್ದಾರೆ. ಎತ್ತ ಸಾಗುತ್ತಿದೆ ನಮ್ಮ ದೇಶ ಎಂಬ ಆತಂಕ ಸೃಷ್ಟಿಯಾಗುತ್ತಿದೆ. ಇದರಿಂದ ನಾನು ತುಂಬ ವೈರಾಗ್ಯಕ್ಕೊಳಗಾಗುವಂತಾಗಿದೆ. ಆಧುನಿಕತೆಯ ವೇಗದಲ್ಲಿ ದಿನದಿಂದ ದಿನಕ್ಕೆ ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಕುಟುಂಬದ ಜತೆಗೆ ಬಾಂಧವ್ಯ, ಪ್ರೀತಿಯ ಪರಿಶುದ್ಧತೆ ಬರಬೇಕಿದೆ ಎಂದರು.
ಎಐ ಅಷ್ಟೇ ವೇಗವಾಗಿ ಶ್ರೀಮಠವಿದೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಧಾರ್ಮಿಕ ಮಠಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವನ್ನು ನೀಡುತ್ತಿರುವ ಏಕೈಕ ಮಠ ಆದಿಚುಂಚನಗಿರಿ ಮಠವಾಗಿದೆ. ಯುವ ಪೀಳಿಗೆಗೆ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ವಿಜ್ಞಾನ ತಂತ್ರಜ್ಞಾನದ ಅರಿವನ್ನು ತಿಳಿಸುತ್ತಿರುವುದು ಶ್ಲಾಘನೀಯ. ಇಂದು ಜಾಗತೀಕರಣ ತುಂಬ ವೇಗವಾಗಿ ಸಾಗುತ್ತಿದೆ.ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಮಾತನಾಡಿ, ವಿಜ್ಞಾತಂ ಉತ್ಸವ ಗುರುಗಳು ಕಂಡಂತಹ ಕನಸಿನ ಮುಂದುವರಿದ ಭಾಗವಾಗಿದೆ. ಹಳ್ಳಿಯ ಮಕ್ಕಳು ಮುಂದುವರಿಯಬೇಕೆಂಬ ಮಹದಾಸೆಯಿಂದ ಚಿಕ್ಕಮಗಳೂರಿನಲ್ಲಿ ತಂತ್ರಜ್ಞಾನದ ಕಾಲೇಜನ್ನು ಮೊದಲಿಗೆ ಸ್ಥಾಪಿಸಿದರು. ಹಳ್ಳಿಯ ಮಗ ಅಮೆರಿಕಕ್ಕೆ ಹೋಗಬೇಕೆಂಬ ಕನಸನ್ನು ಕಂಡಿದ್ದರು ಗುರುಗಳು.ಎಂದರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ವಿಜ್ಞಾತಂ ಪ್ರಶಸ್ತಿ ಪ್ರದಾನ: ಶ್ರೀಆದಿಚುಂಚನಗಿರಿಯ ಡಾ.ನಿರ್ಮಲನಂದನಾಥ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭಿಷೇಕದ ಸಂದರ್ಭದಲ್ಲಿ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಪ್ರತಿವರ್ಷ ಕೊಡಲಾಗುತ್ತಿರುವ ವಿಜ್ಞಾತಂ ಪ್ರಶಸ್ತಿಯನ್ನು ಈ ಬಾರಿ ಡಾ.ಎಂ.ಕೆ.ಸೂರಪ್ಪ ಅವರಿಗೆ ಪ್ರದಾನ ಮಾಡಲಾಯಿತು. ವಿಜ್ಞಾತಂ ಪ್ರಶಸ್ತಿಯು 5 ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ವಿಜ್ಞಾತಂ ಪ್ರಶಸ್ತಿ ಪಡೆದ ಡಾ.ಎಂ.ಕೆ.ಸೂರಪ್ಪ ಹಾಗೂ ಮಾದರ ಶ್ರೀಚನ್ನಯ್ಯ ಸ್ವಾಮೀಜಿ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿವಿಧ ಅನ್ವೇಷಣೆಗಳ ಮಾದರಿಗಳನ್ನು ಶ್ರೀಗಳೊಂದಿಗೆ ಗಣ್ಯರು ವೀಕ್ಷಿಸಿ ಮಾಹಿತಿ ಪಡೆದರು. ವಿಜ್ಞಾತಂ ಸಂಚಯ-4 ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಪ್ರಕಾಶನಾಥ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಸುರೇಶ್‌ಗೌಡ, ಅಕ್ಕ ಸಮ್ಮೇಳನದ ಅಧ್ಯಕ್ಷ ಡಾ.ಅಮರನಾಥಗೌಡ ಸೇರಿದಂತೆ ಮತ್ತಿತರರಿದ್ದರು.
ಚುಂಚಶ್ರೀಗಳ 13ನೇ ವಾರ್ಷಿಕ ಪಟ್ಟಾಭಿಷೇಕ.: ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವವು ವಿವಿಧ ಮಠಗಳ ಸಾಧು ಸಂತರು ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಶ್ರೀಗಳನ್ನು ಅಲಂಕೃತ ಪೀಠದಲ್ಲಿ ಕೂರಿಸಿ ಮಠದ ಸಂಪ್ರದಾಯದಂತೆ ಚಿನ್ನದ ಕಿರೀಟ, ಹಾಗೂ ಆಭರಣಗಳನ್ನು ತೊಡಿಸಿ ಪುಷ್ಪವೃಷ್ಟಿಯೊಂದಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ವಿವಿಧ ಶಾಖಾ ಮಠಗಳ ಶ್ರೀಗಳು ಹೂಮಾಲೆ ಹಾಕಿ ಆಶಿರ್ವಾದ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net