ಸೋತರೂ ಮತ್ತೆ ಎದ್ದು ಬರಬೇಕು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಹೇಳಿಕೆ
ಮಂಡ್ಯದ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಬಿ.ಯು.ಉನ್ನತಿ, ನಿಖಿಲ್ ವರ್ಧನ್ ಹಾಗೂ ಎಂ.ವಿ.ಯಶವಂತಗೌಡ ಅವರನ್ನು ಸನ್ಮಾನಿಸಲಾಯಿತು.
ಮಂಡ್ಯ:ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಅದನ್ನು ಸಾಧಿಸುವ ಛಲ ಇರಬೇಕು. ನಮ್ಮ ಜೀವನವು ‘ಫೀನಿಕ್ಸ್’ ಪಕ್ಷಿಯಂತಿರಬೇಕು. ಸೋತರೂ ಮತ್ತೆ ಎದ್ದು ಬರಬೇಕು. ಕಷ್ಟ ಮತ್ತು ಇಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಸಾಧನೆ ಮಾಡಬಹುದು. ಇಲ್ಲದಿದ್ದರೆ ನಿಮ್ಮ ಜೀವನ ನಶಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಎಚ್ಚರಿಕೆ ನೀಡಿದರು.
ನಗರದ ಹೊರವಲಯದ ಜ್ಞಾನ ಸಾಗರ ಕ್ಯಾಂಪಸ್‌ನಲ್ಲಿರುವ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಹುಟ್ಟುತ್ತಲೇ ಯಾರೂ ದಡ್ಡರಲ್ಲ, ಬುದ್ಧಿವಂತರೂ ಅಲ್ಲ. ಶ್ರದ್ಧೆ ಮತ್ತು ಗುರಿ ಇಟ್ಟುಕೊಳ್ಳಬೇಕು. ಜೀವನದಲ್ಲಿ ಗುರಿ ಏನೇ ಇರಲಿ. ಅದನ್ನು ಪಡೆಯಲು ಶಿಸ್ತು ಇರಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಕುದುರೆ ಮೇಲೆ ಹೋಗಬಹುದು. ಅದುಬಿಟ್ಟು ವಿದ್ಯಾರ್ಥಿ ದಿಸೆಯಲ್ಲೇ ಕುದುರೆ ಏರಲು ಹೋದರೆ ಮುಂದೆ ಕತ್ತೆ ರೀತಿ ದುಡಿಯಬೇಕಾಗುತ್ತದೆ. ಆದ್ದರಿಂದ ಕಷ್ಟಪಟ್ಟು ಮತ್ತು ಇಷ್ಟಪಟ್ಟು ವ್ಯಾಸಂಗ ಮಾಡಿ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅನುತ್ತೀರ್ಣರಾದರೆ ಮನೋರೋಗಕ್ಕೊಳಗಾಗುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿಯಲ್ಲ. ಅನುತ್ತೀರ್ಣರಾದರೆ ಛಲ ಮತ್ತು ಸ್ಫೂರ್ತಿ ಪಡೆಯಬೇಕು. ಪಾಲಕರು ಮಕ್ಕಳಿಗೆ ಸ್ಫೂರ್ತಿ ತುಂಬಬೇಕು. ನಾನೂ ಸಹ ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣನಾಗಿದ್ದೆ, ನಂತರ ಉತ್ತೀರ್ಣನಾಗಿ ವಿಜ್ಞಾನ ವಿಷಯ ತೆಗೆದುಕೊಂಡಾಗ ಹಲವರು ಹೀಯಾಳಿಸಿದರು. ಪ್ರತಿಷ್ಠಿತ ಸಂಸ್ಥೆಯೊಂದು ನನ್ನನ್ನು ಸೇರಿಸಿಕೊಳ್ಳಲೇ ಇಲ್ಲ. ಆಗ ನಾನು ಛಲ ಬೆಳೆಸಿಕೊಂಡು ನನ್ನ ಜೀವನಶೈಲಿಯನ್ನೇ ಬದಲಾಯಿಸಿಕೊಂಡು ಸಾಧನೆ ಮಾಡಿ ಅಧಿಕಾರಿಯಾಗಿ ನನಗೆ ಸೀಟು ಕೊಡಲು ನಿರಾಕರಿಸಿದ ಸಂಸ್ಥೆಗೆ ಅತಿಥಿಯಾಗಿ ಹೋದೆ ಎಂದು ಉದಾಹರಿಸಿದರು.
ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ. ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ಕವಿ ಡಿವಿಜಿ ಅವರು ಹೇಳಿದಂತೆ ‘ಜ್ಞಾನ ಎನ್ನುವ ಸೂರ್ಯ ನಿಮ್ಮ ಮನಸ್ಸಿಗೆ ಹೋದಾಗ ಕತ್ತಲೆ ಸರಿಯುತ್ತದೆ’. ಸೂರ್ಯನ ಬೆಳಕು ನಿತ್ಯ ನೂತನವಾಗಿರುವಂತೆ ನಿಮ್ಮ ಜ್ಞಾನದಿಂದ ಇಡೀ ದೇಶಕ್ಕೆ ಬೆಳಕು ನೀಡುವವರಾಗಬೇಕು. ‘ನೋಡಿ ತಿಳಿ, ಮಾಡಿ ಕಲಿಯಬೇಕು’. ನಿಮ್ಮಲ್ಲಿ ಉತ್ಸಾಹ ನಿರಂತರವಾಗಿರಬೇಕು. ಗುರಿ ಇದ್ದರೆ ಏನನ್ನಾದರೂ ಸಾಧಿಸಬಹುದು. ಗುರಿ ಇಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ. ಗುರಿ ಮತ್ತು ಶ್ರದ್ಧೆ ಇದ್ದರೆ ನೂರು ಜನರನ್ನೂ ದಾಟಿ ಮುಂದೆ ಹೋಗಬಹುದು ಎಂದರು.
ಸ್ವಾಮಿ ವಿವೇಕಾನಂದರು ಯುವಶಕ್ತಿಗೆ ಪ್ರಾಮುಖ್ಯತೆ ನೀಡಿದ್ದರು. ಅವರು 300 ಜನ ಯುವಕರನ್ನು ಕೊಟ್ಟರೆ ಬಲಿಷ್ಟ ರಾಷ್ಟ್ರ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಇದರಿಂದಲೇ ಅವರು ಹುಟ್ಟಿದ ದಿನ ಜ.12ರಂದು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಭಯಪಡಬಾರದು, ಗುರಿ ಇಟ್ಟುಕೊಂಡು ಧೈರ್ಯವಾಗಿ ಮುಂದೆ ಸಾಗಿದರೆ ಸಾಧನೆ ಮಾಡಬಹುದು. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ನಿಮ್ಮ ಪಾಲಕರು ಕಂಡಿರುವ ಕನಸನ್ನು ನನಸು ಮಾಡಬೇಕೆಂದು ಸಲಹೆ ನೀಡಿದರು.
ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಂಶುಪಾಲ ಎಚ್.ಎಂ.ಶ್ರೀನಿವಾಸ್, ಶೈಕ್ಷಣಿಕ ಪಾಲುದಾರರಾದ ಚೇತನ್ ಕೃಷ್ಣ, ಎಂ.ಆರ್. ಮಂಜು ಮುತ್ತೇಗೆರೆ, ಮಂಜುನಾಥ್, ಮುಜಾಹಿದ್ದಿನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಜೂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಬಿ.ಯು.ಉನ್ನತಿ, ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ 125 ಕೆ.ಜಿ. ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ನಿಖಿಲ್ ವರ್ಧನ್ ಹಾಗೂ ರಾಜ್ಯಮಟ್ಟದ ಫೆನ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ ಎಂ.ವಿ.ಯಶವಂತಗೌಡ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.