ಮೇಲುಕೋಟೆ ಪ್ರಾಥಮಿಕ ಶಾಲೆಗೆ ಪ್ರೌಢಶಾಲೆ ಮಂಜೂರು

ಮೇಲುಕೋಟೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿರುವ 150 ವರ್ಷ ಪೂರೈಸಿದ ಶತಮಾನದ ಶಾಲೆ.
ಮೇಲುಕೋಟೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿರುವ 150 ವರ್ಷ ಪೂರೈಸಿದ ಶತಮಾನದ ಶಾಲೆ.
Published on
ಮೇಲುಕೋಟೆ: ಮೇಲುಕೋಟೆಯ 150 ವರ್ಷ ಪೂರೈಸಿದ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಶಾಲಾ ಶಿಕ್ಷಣ ಇಲಾಖೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಮೇಲುಕೋಟೆಯಲ್ಲಿದ್ದ ಅನುದಾನಿತ ಯದುಶೈಲ ಪ್ರೌಢಶಾಲೆ ಕಳೆದ ವರ್ಷ ಮುಚ್ಚಿದ್ದ ಕಾರಣ ಸರ್ಕಾರಿ ಪ್ರೌಢಶಾಲೆಯನ್ನು ಪ್ರಸಕ್ತ ಸಾಲಿನಲ್ಲೇ ಆರಂಭಿಸಲಾಗಿದ್ದು, 8ನೇ ತರಗತಿಗೆ 25 ಮಕ್ಕಳು ದಾಖಲಾಗಿದ್ದಾರೆ. ಪ್ರೌಢಶಾಲೆಯಲ್ಲಿ 9 ಮತ್ತು 10ನೇ ತರಗತಿಗಳು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗಲಿದೆ.
ಕೆ.ಆರ್.ಪೇಟೆ ತಾಲೂಕಿನ ಬಿಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶೂನ್ಯ ದಾಖಲಾತಿಯಿಂದ ಕಳೆದ 6 ವರ್ಷಗಳ ಹಿಂದೆಯೇ ಮುಚ್ಚಿಹೋಗಿದ್ದರಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆಯಂತೆ ಮೇಲುಕೋಟೆಯ ಬಾಲಕರ ಶಾಲೆಗೆ ಸ್ಥಳಾಂತರ ಮಾಡಿ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಶ್ಮಿ ಮಹೇಶ್ ಆದೇಶ ಮಾಡಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕ್ರಮದಿಂದಾಗಿ ಮುಚ್ಚಿಹೋಗಿದ್ದ ಸರ್ಕಾರಿ ಪ್ರೌಢಶಾಲೆಗೆ ಮೇಲುಕೋಟೆಯಲ್ಲಿ ಮರುಜೀವ ನೀಡುವ ಜತೆಗೆ ಈ ಭಾಗದ ಮಕ್ಕಳಿಗೆ ಅದರಲ್ಲೂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪೂರಕ ವಾತಾವರಣ ಒದಗಿಸಿಕೊಟ್ಟಂತಾಗಿದೆ.
ಎಲ್‌ಕೆಜಿ, ಯುಕೆಜಿ ಮತ್ತು 1ರಿಂದ 7ನೇ ತರಗತಿಯವರೆಗಿನ ಸರ್ಕಾರಿ ಶಾಲೆಯಲ್ಲಿ ಮತ್ತೆ ಹೈಸ್ಕೂಲ್ ಆರಂಭವಾಗುತ್ತಿರುವುದು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ದಾಖಲಾದ ಮಕ್ಕಳಿಗೆ ಉಚಿತವಾಗಿ ಒಂದೇ ಕಡೇ ಪೂರ್ವ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯಲು ಅನುಕೂಲವಾಗಲಿದ್ದು, ಈ ಭಾಗದ ಪಾಲಕರ ಬಹುದಿನಗಳ ಆಶಯ ಈಡೇರಿದೆ.
ಶಾಸಕರು, ಮೇಲುಕೋಟೆ ಗ್ರಾಪಂ ಮನವಿಗೆ ಸ್ಪಂದಿಸಿದ ಶಿಕ್ಷಣ ಸಚಿವರಾಗಿದ್ದ ಮಧುಬಂಗಾರಪ್ಪ ಮತ್ತು ಆಪ್ತ ಕಾರ್ಯದರ್ಶಿ ಕಿಶೋರ್‌ಕುಮಾರ್, ಇಲಾಖಾಧಿಕಾರಿಗಳಿಗೆ ತ್ವರಿತವಾಗಿ ಸ್ಪಂದಿಸಲು ಸೂಚಿಸಿದ್ದರು. ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ, ಮಂಡ್ಯ ಡಿಡಿಪಿಐ ಲೋಕೇಶ್, ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಜತೆಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎನ್.ಚೆಲುವರಾಯಸ್ವಾಮಿ ಸಹ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net