ಹೇಮಗಿರಿ ದನಗಳ ಜಾತ್ರೆ, ರಥೋತ್ಸವಕ್ಕೆ ಸೌಕರ್ಯ ಕಲ್ಪಿಸಿ

ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಹೇಮಗಿರಿ ದನಗಳ ಜಾತ್ರೆ ಹಾಗೂ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥಸ್ವಾಮಿ ದನಗಳ ಜಾತ್ರೆಯ ಪೂರ್ವಭಾವಿ ಸಭೆ ನಡೆಯಿತು. ಶಾಸಕ ಎಚ್.ಟಿ.ಮಂಜು, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಕೆ.ಸುಷ್ಮಾ, ಬಲದೇವ್,  ಲತಾಮಣಿ ಮಂಜೇಗೌಡ, ಡಾ.ಎಚ್.ಎಸ್.ದೇವರಾಜು, ಆರ್‌ಎಫ್‌ಒ ಡಾ.ಅನಿತಾ ಇತರರು ಇದ್ದರು.
ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಹೇಮಗಿರಿ ದನಗಳ ಜಾತ್ರೆ ಹಾಗೂ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥಸ್ವಾಮಿ ದನಗಳ ಜಾತ್ರೆಯ ಪೂರ್ವಭಾವಿ ಸಭೆ ನಡೆಯಿತು. ಶಾಸಕ ಎಚ್.ಟಿ.ಮಂಜು, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಕೆ.ಸುಷ್ಮಾ, ಬಲದೇವ್, ಲತಾಮಣಿ ಮಂಜೇಗೌಡ, ಡಾ.ಎಚ್.ಎಸ್.ದೇವರಾಜು, ಆರ್‌ಎಫ್‌ಒ ಡಾ.ಅನಿತಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಎಚ್.ಟಿ.ಮಂಜು ಸೂಚನೆ
  • ಪೂರ್ವಭಾವಿ ಸಭೆ
ಕೆ.ಆರ್.ಪೇಟೆ: ಇತಿಹಾಸ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆ ಜ.15ರಿಂದ ಪ್ರಾರಂಭವಾಗಲಿದ್ದು, ಹೇಮಗಿರಿ ಶ್ರೀ ಕ್ಷೇತ್ರ ರಕ್ಷಕ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ ಜ.25ರಂದು ನಡೆಯಲಿದೆ. ತೆಪ್ಪೋತ್ಸವವು ಹೇಮಾವತಿ ನದಿಯಲ್ಲಿ ಜ.29ರಂದು ನಡೆಯಲಿದೆ. ಹಾಗಾಗಿ ರೈತರಿಗೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಸೂಚನೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹೇಮಗಿರಿ ದನಗಳ ಜಾತ್ರೆ ಹಾಗೂ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥಸ್ವಾಮಿ ದನಗಳ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೇಮಗಿರಿ ದನಗಳ ಜಾತ್ರೆಯಲ್ಲಿ ಲಕ್ಷಾಂತರ ರಾಸುಗಳು ಆಗಮಿಸುತ್ತವೆ. ತಮಿಳುನಾಡು, ಕೇರಳ, ಆಂಧ್ರ ಮಹಾರಾಷ್ಟ್ರ ರಾಜ್ಯಗಳಿಂದಲೂ ಜಾನುವಾರುಗಳನ್ನು ರೈತರು ಕರೆ ತರುತ್ತಾರೆ. ಹಾಗಾಗಿ ಜಾತ್ರೆಯ ಆರಂಭಕ್ಕೆ ಕನಿಷ್ಠ ನಾಲ್ಕೈದು ದಿನಗಳ ಮುಂಚೆಯೇ ಜಾತ್ರಾ ಮಾಳದಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಸೆಸ್ಕ್ ಅಧಿಕಾರಿಗಳು ಮಾಡಬೇಕು. ಬಂಡಿಹೊಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ದೇವಸ್ಥಾನದ ಸುತ್ತ ಹಾಗೂ ಜಾತ್ರೆ ಕಟ್ಟುವ ಸ್ಥಳದಲ್ಲಿ ಬೆಳೆದಿರುವ ಅನುಪಯುಕ್ತ ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಛಗೊಳಿಸುವ ಮೂಲಕ ಜಾನುವಾರುಗಳನ್ನು ಕಟ್ಟಲು ಅವಕಾಶವಾಗುವಂತೆ ನೋಡಿಕೊಳ್ಳಬೇಕು. ಜಾತ್ರೆ ನಡೆಯುವ ಸಂದರ್ಭದಲ್ಲಿ ರೈರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೀರಾವರಿ ಇಲಾಖೆಯ ಅಧಿಕಾರಿಗಳು ಜಾತ್ರೆಯು ಆರಂಭವಾಗುವುದಕ್ಕೆ ಮೊದಲು ಕಾಲುವೆಯಲ್ಲಿ ಹೇಮಾವತಿ ನೀರನ್ನು ಹರಿಸುವ ಮೂಲಕ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಥೋತ್ಸವಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆಗಳು ಮತ್ತು ಹೇಮಗಿರಿ ಜಾತ್ರೆಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು ಎಂದರು.
ಪಶುವೈದ್ಯ ಇಲಾಖೆ ಅಧಿಕಾರಿಗಳು ದನಗಳ ಜಾತ್ರೆಯ ಆವರಣದಲ್ಲಿ ಅಲ್ಲಲ್ಲಿ ತಾತ್ಕಾಲಿಕ ಪಶು ಆಸ್ಪತ್ರೆಗಳನ್ನು ತೆರೆಯಬೇಕು. ಜಾನುವಾರುಗಳಿಂದ ಯಾವುದೇ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಜಾತ್ರೆ ಮಾಳದಲ್ಲಿ ತುರ್ತು ಚಿಕಿತ್ಸೆ ನೀಡಲು ತಾತ್ಕಾಲಿಕ ಆಸ್ಪತ್ರೆ ತೆರೆಯಬೇಕು. ಅಬಕಾರಿ ಇಲಾಖೆ ಅಧಿಕಾರಿಗಳು ರಥೋತ್ಸವದ ದಿನ ಹೇಮಗಿರಿ, ಬಂಡಿಹೊಳೆ ಸುತ್ತಮುತ್ತ ಇರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಬೇಕು. ಜಾತ್ರೆ ವೇಳೆ ಅಗತ್ಯ ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಜಾತ್ರೆಗೆ ಬರುವ ರೈತರಿಗೆ ರಾತ್ರಿಯ ವೇಳೆ ಮನರಂಜನಾ ಕಾರ್ಯಕ್ರಮ ರೂಪಿಸುವಂತೆ ಪತ್ರ ಬರೆಯುವಂತೆ ತಹಸೀಲ್ದಾರ್ ಅವರಿಗೆ ಸಲಹೆ ನೀಡಿದರು. ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರ ಪಡೆದು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ದೇವಸ್ಥಾನದ ಒಳಗೆ ಮತ್ತು ಹೊರಗೆ ಆಗಬೇಕಾದ ಸುಣ್ಣ-ಬಣ್ಣ, ಸ್ವಚ್ಛತೆ, ದೇವಾಲಯದ ಬಳಿ ಇರುವ ಸಮುದಾಯ ಭವನದ ಸ್ವಚ್ಛತೆ ಸೇರಿದಂತೆ ಜಾತ್ರೆಯ ಯಶಸ್ಸಿಗೆ ಬೇಕಾದ ಅಗತ್ಯ ಕೆಲಸ ಕಾರ್ಯಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರಿಗೆ ಶಾಸಕರು ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಸುಷ್ಮಾ, ತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಉಪಾಧ್ಯಕ್ಷೆ ಲತಾಮಣಿ ಮಂಜೇಗೌಡ, ತಾಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ದೇವರಾಜು, ತಾಲೂಕು ಅರಣ್ಯ ಇಲಾಖೆಯ ಆರ್‌ಎಫ್‌ಒ ಡಾ.ಅನಿತಾ, ಆರಕ್ಷಕ ನಿರೀಕ್ಷಕರಾದ ಸುಮಾರಾಣಿ, ಆನಂದೇಗೌಡ, ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಸತೀಶ್, ಹೇಮಗಿರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ, ದಿಶಾ ಸಮಿತಿ ಸದಸ್ಯ ನರಸನಾಯಕ್, ನೀರಾವರಿ ಇಲಾಖೆಯ ಎಇಇ ಆನಂದ್, ಕಸಬಾ ರಾಜಸ್ವ ನಿರೀಕ್ಷಕ ಜ್ಞಾನೇಶ್, ಮುಜರಾಯಿ ಇಲಾಖೆಯ ವಿಷಯ ನಿರ್ವಾಹಕಿ ಪೂರ್ಣಿಮಾ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಬಂಡಿಹೊಳೆ, ಕುಪ್ಪಹಳ್ಳಿ, ಬಿಬಿ.ಕಾವಲು, ಬಿಲ್ಲೇನಹಳ್ಳಿ, ರಂಗನಾಥಪುರ ಕ್ರಾಸ್, ಹೆತ್ತಗೋನಹಳ್ಳಿ ಸೇರಿದಂತೆ ಗ್ರಾಮಗಳ ಹಲವು ಮುಖಂಡರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net