

* ಆಯುಷ್ಮಾನ್ ಕೇಂದ್ರ ನಿರ್ಮಾಣಕ್ಕೆ ಶಂಕು
ಮದ್ದೂರು: ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲೂಕು ವ್ಯಾಪ್ತಿಯ ವಿವಿಧ ಹೋಬಳಿಗಳ ಮುಖ್ಯ ಆರೋಗ್ಯ ಕೇಂದ್ರಗಳ ಸುಧಾರಣೆ ಸೇರಿದಂತೆ ಅಭಿವೃದ್ಧಿಗೆ ಗಮನಹರಿಸಲಾಗುವುದು ಎಂದು ಶಾಸಕ ಕೆ. ಎಂ. ಉದಯ್ ತಿಳಿಸಿದರು.
ತಾಲೂಕಿನ ನಗರಕೆರೆ ಗ್ರಾಮದಲ್ಲಿ 65 ಲಕ್ಷ ರೂ.ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರಕೆರೆ, ಮಹರ್ನವಮಿ ದೊಡ್ಡಿ, ನಿಡಘಟ್ಟ ಸೇರಿದಂತೆ ಹಲವು ಕಡೆಗಳಲ್ಲಿ ಅಯುಷ್ಮಾನ್ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಕೇಂದ್ರಗಳ ಅಸುಪಾಸಿನ ಹಲವಾರು ಗ್ರಾಮಗಳ ಜನರಿಗೆ
ಆರೋಗ್ಯ ಸೇವೆ ಲಭ್ಯವಾಗಲಿದೆ ಎಂದರು. ಈಗಾಗಲೇ ತಾಲೂಕು ಆಸ್ಪತ್ರೆಯನ್ನು 7 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ನವೀಕರಣ ಮಾಡುವುದರೊಂದಿಗೆ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ವಸತಿ ಗೃಹ, ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
ಹೋಬಳಿ ಹಂತದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿವಿಧ ರೀತಿಯ ವೈದ್ಯಕೀಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಕೆಲವು ಕಡೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದು ನಿಜ. ತಾಲೂಕಿನಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ. ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ
ಪರಿಹರಿಸಲಾಗುವುದು ಎಂದರು. ಮುಖಂಡರಾದ ನಗರಕೆರೆ ಸಂದೀಪ್, ಶಿಲ್ಪಾ, ನಿಂಗಪ್ಪ, ನಾಗರಾಜು, ರಿತೇಶ್ ಗೌಡ, ನಿಂಗರಾಜು,ಮಹದೇವಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ರವಿಶಂಕರ್ ಇತರರು ಉಪಸ್ಥಿತರಿದ್ದರು.