ಕಿಕ್ಕೇರಿ ಸಮೀಪದ ಮಂದಗೆರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಜಯರಾಂ, ನಂದಿನಿ ಜಯರಾಂ, ಶ್ರೀನಿವಾಸಗೌಡ, ನಂದಿನಿ, ಮಂಗಳಾ, ಮಂಜೇಗೌಡ, ನಿಂಗಮ್ಮ ಮತ್ತಿತರರಿದ್ದರು.
ಕಿಕ್ಕೇರಿ: ಸ್ವಾರ್ಥ ಬಿಟ್ಟು ಮೊದಲು ಆರೋಗ್ಯಕ್ಕೆ ಗಮನಹರಿಸಿ ಎಂದು ರೈತ ಸಂಘದ ಹಿರಿಯ ಮುಖಂಡ ಮಂದಗೆರೆ ಜಯರಾಂ ತಿಳಿಸಿದರು.
ಸಮೀಪದ ಚಿಕ್ಕಮಂದಗೆರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಮಂಗಳವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಶಿಬಿರಗಳು ನಡೆಯುವುದರಿಂದ ರೈತಾಪಿ ವರ್ಗ, ಬಡ ಸಮುದಾಯಕ್ಕೆ ಅನುಕೂಲವಾಗಲಿದೆ. ತಮ್ಮ ಮನೆ ಬಳಿಗೆ ಬರುವ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಆರೋಗ್ಯವಂತರಾಗಿ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದರು.
ತಾಲೂಕು ಯೋಜನಾಧಿಕಾರಿ ಶ್ರೀನಿವಾಸಗೌಡ ಮಾತನಾಡಿ, ಸಂಸ್ಥೆ ಆರೋಗ್ಯ, ಶಿಕ್ಷಣ, ಸ್ವಾವಲಂಬನೆ ಬದುಕಿಗೆ ಹತ್ತಾರು ಯೋಜನೆಗಳನ್ನು ರೂಪಿಸಿಕೊಂಡಿದೆ. ಶಿಕ್ಷಣಕ್ಕೆ ಮಕ್ಕಳಿಗೆ ವಿಶೇಷ ಒತ್ತು ನೀಡಿ ಎಂದು ಸಲಹೆ ನೀಡಿದರು.
ರೈತ ಮಹಿಳಾ ಹೋರಾಟಗಾರರಾದ ನಂದಿನಿ ಜಯರಾಂ ಮಾತನಾಡಿ, ರಾಸಾಯನಿಕ ಮುಕ್ತ ಆಹಾರ ಜೀವನ ಶೈಲಿ ಆಗಬೇಕಿದೆ. ಸಾವಯವ ಕೃಷಿ ಪದ್ಧತಿ ಅಳವಡಿಕೆಗೆ ಸರ್ಕಾರ ವಿಶೇಷ ಪ್ರೋತ್ಸಾಹ ನೀಡಬೇಕಿದೆ. ಆರೋಗ್ಯ ಜಾಗೃತಿಗಾಗಿ ಸಂಸ್ಥೆ ಸಾವಯವ ಕೃಷಿಗೆ ರೈತರಿಗೆ ಉತ್ತೇಜಿಸುತ್ತಿದೆ. ಆರೋಗ್ಯಕರ ಜೀವನ ನೆಮ್ಮದಿ ಬದುಕಿಗೆ ಸಹಕಾರಿಯಾಗಲಿದೆ ಎಂದು ನುಡಿದರು.
ಅಪೂರ್ವ ನ್ಯೂ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಸ್ನೇಹಾ ಹಾಗೂ ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ನೇತ್ರಾ ಅವರು ತಪಾಸಣೆ ನಡೆಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ, ಸೇವಾ ಪ್ರತಿನಿಧಿ ಮಂಗಳಾ, ಮಂಜೇಗೌಡ, ನಿಂಗಮ್ಮ, ಗ್ರಾಮದ ಮುಖಂಡರು ಇದ್ದರು.