ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜನ ಸ್ಪಂದನ ಸಭೆಯಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜನ ಸ್ಪಂದನ ಸಭೆಯಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
Published on
ಬೇಲೂರು : ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನ ಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆಯೇ ಆಯಿತು.
ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರು, ತಮ್ಮ ಸಮಸ್ಯೆಗಳ ನಿವಾರಣೆಗಾಗಿ ತಹಸೀಲ್ದಾರ್‌ಗೆ ವಿವಿಧ ಅಹವಾಲು ಸಲ್ಲಿಸಿದರು.
ಭೂಮಿ ದಾಖಲೆ, ಖಾತೆ ವರ್ಗಾವಣೆ, ಪಹಣಿ ತಿದ್ದುಪಡಿ, ನಿವೇಶನದ ಸಮಸ್ಯೆ, ವೃದ್ಧಾಪ್ಯ ಹಾಗೂ ಅಂಗವಿಕಲರ ಪಿಂಚಣಿ, ಪಡಿತರ ಚೀಟಿ, ಮನೆ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕೆಲವೊಂದು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು. ಬಾಕಿ ಅರ್ಜಿಗಳಿಗೆ ನಿಗದಿತ ಅವಧಿಯಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ರೈತ ಸಂಘದ ಮುಖಂಡ ಸ್ವಾಮಿಗೌಡ ಮಾತನಾಡಿ, ತಾಲೂಕಿನಲ್ಲಿ ವ್ಯಾಪಕವಾಗಿ ಕಾಫಿ ಕಳ್ಳತನವಾಗುತ್ತಿದೆ. ಮಧ್ಯ ವಯಸ್ಸಿನ ಯುವಕರು ಮಾದಕ ವಸ್ತುಗಳ ದಾಸರಾಗಿ ರಸ್ತೆಗಳಲ್ಲೆ ಜಗಳ, ಹೊಡೆದಾಡುತ್ತ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಪ್ರತಿ ಗ್ರಾಮಗಳಲ್ಲೂ ಅಕ್ರಮ ಮದ್ಯ ಮಾರಾಟ ನಡೆಯುತಿದ್ದರೂ ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ-ಕಾಲೇಜುಗಳ ಮೈದಾನ ಕುಡುಕರ ಅಡ್ಡೆಯಾಗಿವೆ. ದೇವಾಲಯದ ಹಿಂಭಾಗದ ರಸ್ತೆಯಲ್ಲಿ ಸಂತೆ, ವ್ಯಾಪಾರ-ವಹಿವಾಟು ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಜನ ಸ್ಪಂದನ ಕಾರ್ಯಕ್ರಮ ತಾಲೂಕಿನ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ತಾಲೂಕು ಆಡಳಿತದ ಗಮನಕ್ಕೆ ತರುವುದಕ್ಕೆ ಉತ್ತಮ ವೇದಿಕೆಯಾಗಿದೆ. ಜನರು ಕಚೇರಿಗಳನ್ನು ಸುತ್ತಾಡಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ಜಾರಿಗೆ ತಂದಿದೆ. ಪ್ರತಿಯೊಬ್ಬ ನಾಗರಿಕರ ಸಮಸ್ಯೆಯನ್ನು ಆಲಿಸಿ, ಕಾನೂನು ಹಾಗೂ ನಿಯಮಗಳಡಿ ತ್ವರಿತ ಮತ್ತು ನ್ಯಾಯ ಸಮ್ಮತ ಪರಿಹಾರ ನೀಡಲಾಗುವುದು. ಭೂ ದಾಖಲೆ, ಖಾತೆ, ಪಿಂಚಣಿ, ಪಡಿತರ ಚೀಟಿ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳು ಜನ ಸ್ಪಂದನದಲ್ಲಿ ಹೆಚ್ಚಾಗಿ ಬರುತ್ತಿವೆ. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ್ದು, ಉಳಿದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ದಾಖಲೆ ಪರಿಶೀಲಿಸಿ ನಿಗದಿತ ಅವಧಿಯಲ್ಲಿ ಅರ್ಜಿದಾರರಿಗೆ ನ್ಯಾಯ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಾರ್ವಜನಿಕರು ದಲ್ಲಾಳಿಗಳು ಅಥವಾ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಕಚೇರಿಯಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಅಲ್ಲದೆ ಸರ್ಕಾರದ ಯೋಜನೆಗಳ ಸದುಪಯೋಗವನ್ನು ಅರ್ಹರು ಪಡೆಯಬೇಕು. ಆಡಳಿತ ಪಾರದರ್ಶಕತೆ ಮತ್ತು ಜನರೊಂದಿಗೆ ನೇರ ಸಂವಾದವೇ ಉತ್ತಮ ಆಡಳಿತಕ್ಕೆ ದಾರಿಯಾಗಲಿದೆ. ಆದ್ದರಿಂದ ಇಂತಹ ಜನಸ್ಪಂದನ ಕಾರ್ಯಕ್ರಮವು ಜನರ ಸಮಸ್ಯೆಗಳನ್ನು ನೇರವಾಗಿ ಕೇಳಿ ಪರಿಹರಿಸುವ ಪರಿಣಾಮಕಾರಿ ವೇದಿಕೆಯಾಗಿದ್ದು, ಮುಂದೆಯೂ ಹಂತ ಹಂತವಾಗಿ ನಡೆಸಲಾಗುವುದು.ಮುಂದಿನ ದಿನಗಳಲ್ಲಿ ಪೊಲೀಸ್, ಕಂದಾಯ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳೊಂದಿಗೆ ಗಾಂಜಾ ವಿರೋಧಿ ಅಭಿಯಾನ ನಡೆಸಲಾಗುವುದು. ಕಾಫಿ ಕಳ್ಳತನ, ಅಕ್ರಮ ಮದ್ಯ, ವ್ಹೀಲಿಂಗ್ ಸೇರಿದಂತೆ ಇತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಬಿಇಒ ಭಾಗ್ಯಮ್ಮ, ಪಿಎಸ್‌ಐ ಶಿವಾನಂದ ಜಿ.ಪಾಟೀಲ್, ಡಾ.ವಿಜಯ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net