ಮಳವಳ್ಳಿ ಪಟ್ಟಣದಲ್ಲಿ ಪೊಲೀಸ್ ಮತ್ತು ಅಗ್ನಿ ಶಾಮಕ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಲವಾಹನಗಳನ್ನು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಸಹ್ತಾಂತರಿಸಿದರು. ಐಜಿಪಿ ಬೋರಲಿಂಗಯ್ಯ, ಎಸ್ಪಿ ಶೋಭಾರಾಣಿ ಇದ್ದರು.
ಮಳವಳ್ಳಿ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಅನುಕೂಲವಾಗುವ ಉದ್ದೇಶದಿಂದ ಕೆಲವು ಸಲಕರಣೆಗಳನ್ನು ನೀಡಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಪಟ್ಟಣದ ಅನಂತರಾವ್ ಸರ್ಕಲ್ನಲ್ಲಿ ಸೋಮವಾರ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಸಿಸಿ ಟಿವಿ ಕಮಾಂಡರ್ ಸೆಂಟರ್, ಪೊಲೀಸ್ ವಾಹನಗಳು ಮತ್ತು ಅಗ್ನಿಶಾಮಕ ವಾಹನಗಳಿಗೆ ಚಾಲನೆ ಹಾಗೂ ಟ್ರಾಫಿಕ್ ಸಿಗ್ನಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಕೃಷಿ ಪದ್ಧತಿಯ ಮೂಲಕ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎಂದು ಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಹಲವಾರು ಏತ ನೀರಾವರಿ ಯೋಜನೆಗಳು ಜಾರಿಗೆ ತಂದು ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದೇನೆ. ನನ್ನ ಕನಸಿನ ಯೋಜನೆಯಾದ ಬಿ.ಜಿ.ಪುರ ಹೋಬಳಿಯ ಪೂರಿಗಾಲಿ ಹನಿ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಿದ್ದೇನೆ ಎಂದರು.
ನಂಜುಂಡಪ್ಪ ವರದಿಯ ಪ್ರಕಾರ ಮಳವಳ್ಳಿ ತಾಲೂಕು ಆರ್ಥಿಕವಾಗಿ ಹಿಂದುಳಿದಿದ್ದು, ಕನ್ನಂಬಾಡಿ ಅಣೆಕಟ್ಟೆ ನೀರು ಸಹ ಕ್ಷೇತ್ರದ ಕೊನೆಯ ಭಾಗಕ್ಕೆ ತಲುಪುತ್ತಿಲ್ಲ. ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ನನ್ನ ಮೊದಲ ಆದ್ಯತೆ ನೀಡುತ್ತೇನೆ. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಬಲವರ್ಧನೆಗೆ ಒತ್ತು ನೀಡುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದಲ್ಲಿ ಡಿಜಿಟಲ್ ಶಿಕ್ಷಣ ಮತ್ತು ಮಲ್ಟಿ ಮೀಡಿಯಾ ಸೆಂಟರ್ ತೆರೆಯಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ, ಐಜಿಪಿ ಬೋರಲಿಂಗಯ್ಯ, ಎಸ್ಪಿ ಶೋಭಾರಾಣಿ, ಸಿಇಒ ನಂದಿನಿ, ಸನ್ಸಾರೆ ಪ್ರೈ ಲಿಮಿಟೆಡ್ ಮ್ಯಾನೇಜರ್ ಮನೋಹರ್, ಉದ್ಯಮಿಗಳಾದ ವಸಂತ್ ಭಾರದ್ವಾಜ್, ಗಿರೀಶ್ ರಾಜ್, ಸೂರ್ಯ ನಾರಾಯಣ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಚಂದನ್ ಇತರರಿದ್ದರು.