ಬೆಳದಿಂಗಳಲ್ಲಿ ಹಳ್ಳಿ ಹಬ್ಬ

ಜಾನಪದ ಕಲಾತಂಡಗಳ ಮೆರುಗು
kadaluru
ಕದಲೂರು ಗ್ರಾಮದಲ್ಲಿ ಆಯೋಜಿಸಿದ್ದ ಬೆಳದಿಂಗಳಲ್ಲಿ ಹಳ್ಳಿ ಹಬ್ಬ ಅಂದು ಇಂದು ಕಾರ್ಯಕ್ರಮವನ್ನು ಶಾಸಕರಾದ ಕೆ.ಎಂ.ಉದಯ್, ದಿನೇಶ್ ಗೂಳಿಗೌಡ ಉದ್ಘಾಟಿಸಿದರು. ಡಾ.ಕೆ.ಎಂ.ವಸುಂಧರಾ, ವಿನುತಾ ಉದಯ್, ಪ್ರೊ.ಜಯಪ್ರಕಾಶ್ ಗೌಡ, ಡಾ.ಎಂ.ಕೆಂಪಮ್ಮ, ಕದಲೂರು ರಾಮಕೃಷ್ಣ, ಸಿ.ರಾಮಣ್ಣ, ಡಾ.ಬಿ.ಕೃಷ್ಣ ಇದ್ದರು.beladingalu
Published on: 

ಮದ್ದೂರು: ತಾಲೂಕಿನ ಕದಲೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಬೆಳದಿಂಗಳಲ್ಲಿ ಹಳ್ಳಿಹಬ್ಬ ಅಂದು-ಇಂದು ಕಾರ್ಯಕ್ರಮ ಮನಸೂರೆಗೊಂಡಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀ ಪಟ್ಟಲದಮ್ಮ ಸೇವಾ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಜಾನಪದ ಕಲಾತಂಡಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.

ಬೆಳದಿಂಗಳ ಕುರಿತ ಸ್ವಾಗತ ನೃತ್ಯ, ತಮಟೆ, ನಗಾರಿ ವಾದನ, ಪೂಜೆ, ಪಟ, ರಂಗಕುಣಿತ, ವೀರಗಾಸೆ, ಮೂಡಲಪಾಯ ಯಕ್ಷಗಾನ, ದೇವಿ ಮಹಾತ್ಮೆಯ ಒಂದು ದೃಶ್ಯ, ಜಾನಪದ ಗೀತ ಗಾಯನ ಮತ್ತು ಕಥೆಗಳ ತುಣುಕು, ಗ್ರಾಮೀಣ ನುಡಿ, ಸೊಗಡು, ಸೋಬಾನೆ ಪದ, ಕೋಲಾಟ, ಜಾನಪದ ಹಾಸ್ಯ, ಜಾದು ಕಾರ್ಯಕ್ರಮ, ಗಾರುಡಿಗೊಂಬೆ, ಕೀಲು ಕುದುರೆ, ಗೊಂಬೆ ಕುಣಿತ, ಹುಲಿವೇಷ ನೃತ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳು ಗಮನ ಸೆಳೆದವು.

ಇದಕ್ಕೂ ಮುನ್ನ ಕದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರಿಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ವಿನುತಾ ಉದಯ್, ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮೀಣ ಸಂಸ್ಕೃತಿ, ಪರಂಪರೆ ಹಾಗೂ ಹಿನ್ನೆಲೆಯನ್ನು ಯುವಜನರಿಗೆ ತಿಳಿಸುವ ಹಿನ್ನೆಲೆಯಲ್ಲಿ ಬೆಳದಿಂಗಳಲ್ಲಿ ಹಳ್ಳಿಹಬ್ಬ ಆಯೋಜಿಸಲಾಗಿದೆ ಎಂದರು.

ಗ್ರಾಮೀಣ ಸೊಗಡಿನ ಊಟ: ಕಾರ್ಯಕ್ರಮದಲ್ಲಿ ಕಜ್ಜಾಯ, ಅವರೆಕಾಳು ಕೂಟು, ಮುದ್ದೆ, ಅನ್ನ-ಸಾಂಬಾರ್, ಮಸಾಲೆ ವಡೆ, ಮಜ್ಜಿಗೆ ಸೇರಿದಂತೆ ಗ್ರಾಮೀಣ ಸೊಗಡಿನ ಊಟವನ್ನು ತಯಾರಿಸಿ ಉಣಬಡಿಸಿದ್ದು ವಿಶೇಷವಾಗಿತ್ತು.

ಸಹಬಾಳ್ವೆ ಗಟ್ಟಿಗೊಳಿಸುವ ವೇದಿಕೆ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕ ಕೆ.ಎಂ.ಉದಯ್, ಹಳ್ಳಿ ಹಬ್ಬಗಳು ಗ್ರಾಮ ಸಂಸ್ಕೃತಿ ಮತ್ತು ಜಾನಪದ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ಇವು ಕೇವಲ ಧಾರ್ಮಿಕ ಆಚರಣೆಗಳಷ್ಟೇ ಅಲ್ಲದೆ, ಊರಿನ ಜನರ ನಡುವೆ ಅನ್ನೋನ್ಯತೆ, ಭ್ರಾತೃತ್ವ ಮತ್ತು ಸಹಬಾಳ್ವೆ ಗಟ್ಟಿಗೊಳಿಸುವ ಸಾಂಸ್ಕೃತಿಕ ವೇದಿಕೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವ, ಗಣೇಶೋತ್ಸವ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದೆಯೂ ನೀಡಲಾಗುವುದು. ಹಳ್ಳಿ ಹಬ್ಬ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿರುವುದು ಸಂತಸ ತಂದಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಮಾತನಾಡಿ, ತಾಲೂಕಿನ ಕದಲೂರಿಗೆ ತನ್ನದೇ ಆದ ಹೆಸರಿದ್ದು, ಇದೇ ಗ್ರಾಮದ ಮಗಳಾದ ನಾನು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಯಾಗಿರುವುದು ಹೆಮ್ಮೆಯ ವಿಷಯ ಎಂದರು.

ಇಂದಿನ ಯುವಪೀಳಿಗೆ ಜಾನಪದ ಕಲೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳದಿರುವುದು ಬೇಸರದ ಸಂಗತಿ. ಯುವತಿ, ಯುವಕರು ಪ್ರಸ್ತುತ ದಿನಗಳಲ್ಲಿ ನಗರ ವ್ಯಾಮೋಹಕ್ಕೆ ಒಳಗಾಗಿದ್ದು, ಹೆಚ್ಚು ನಗರಗಳಲ್ಲಿರುವ ಪರಿಣಾಮ ಹಳ್ಳಿಗಳು ವೃದ್ಧಾಶ್ರಮಗಳಾದಂತಾಗಿರುವ ಸನ್ನಿವೇಶದಲ್ಲಿ ತನ್ನೂರಿನ ಗ್ರಾಮದಲ್ಲಿ ಈ ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ರೂಪಿಸಿರುವುದು ಸಂತಸ ತಂದಿದೆ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಗ್ರಾಮೀಣ ಸೊಗಡನ್ನು ಬಿಂಬಿಸುವ ನಿಟ್ಟಿನಲ್ಲಿ ಶಾಸಕ ಕೆ.ಎಂ.ಉದಯ್ ಹುಟ್ಟೂರಿನಲ್ಲಿ ಬೆಳದಿಂಗಳಲ್ಲಿ ಹಳ್ಳಿ ಹಬ್ಬ ಆಯೋಜಿಸುವ ಮೂಲಕ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಮುಂದಾಗಿರುವುದು ಪ್ರಶಂಶನೀಯ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಮನ್‌ಮುಲ್ ಅಧ್ಯಕ್ಷ ಹರೀಶ್‌ಬಾಬು, ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಾ.ಶಿ.ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿ.ರಾಮಣ್ಣ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ, ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಗ್ರಾಪಂ ಮಾಜಿ ಅಧ್ಯಕ್ಷೆ ತಿಮ್ಮೇಗೌಡ, ರೋಟರಿ ಅಧ್ಯಕ್ಷ ಲೋಕೇಶ್, ಹಿರಿಯ ಕಲಾವಿದ ಸಿ.ಕೃಷ್ಣೇಗೌಡ, ಕ.ಜಾ.ಅ ಸದಸ್ಯ ಸಂಚಾಲಕಿ ಡಾ.ಎಂ.ಕೆಂಪಮ್ಮ, ಕ.ಜಾ.ಪ ಮಂಡ್ಯ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವ, ತೂಬಿನಕೆರೆ ಗೋವಿಂದು ಇತರರಿದ್ದರು.