ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಭಾರತೀ ನಗರದ ಭಾರತಿ ಪ್ರೌಢಶಾಲೆಯ 1993-94 ಸಾಲಿನ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು. ಎಂ.ಮಾಯಪ್ಪ, ಶಿಕ್ಷಕರಾದ ಟಿ.ಪಿ.ಚೌಡಯ್ಯ, ಜಿ.ವಿ.ನರಸಿಂಹಮೂರ್ತಿ, ಬಿ.ಸಿ.ಕೃಷ್ಣಪ್ರಸಾದ್, ಡಿ.ಕೆ.ರಾಮಚಂದ್ರಯ್ಯ, ಎಂ.ಎಸ್.ಶಿವಣ್ಣ ಇದ್ದರು.
Published on:
Copied
Follow Us
ಮದ್ದೂರು:
ತಾಲೂಕಿನ ಗೆಜ್ಜಲಗೆರೆಯಲ್ಲಿ ಭಾರತೀ ನಗರದ ಭಾರತಿ ಪ್ರೌಢಶಾಲೆಯ 1993-94 ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಗುರು ಶಿಷ್ಯರ ನಡುವಿನ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.
ಸುಮಾರು 32 ವರ್ಷಗಳ ನಂತರ ಗುರು-ಶಿಷ್ಯರು ಒಂದಾಗುವ ಮೂಲಕ ಹಳೆಯ ಶಾಲಾ ದಿನಗಳ ಮಧುರ ಕ್ಷಣಗಳನ್ನು ಮೆಲುಕು ಹಾಕಿದರು.
ಅಕ್ಷರ ಕಲಿಸಿದ ಸುಂದರ ಬದುಕು ಕಟ್ಟಿಕೊಳ್ಳಲು ಕಾರಣರಾದ ಗುರು ವೃಂದಕ್ಕೆ ವಿದ್ಯಾರ್ಥಿಗಳು ಪುಷ್ಪವೃಷ್ಠಿ ಸುರಿಸಿ ಮೆರವಣಿಗೆ ಮಾಡಿ ಸಾರ್ಥಕ್ಯ ಭಾವ ಮೆರೆದರು. ಗುರುಗಳನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌವಿಸಿದರು.
ಶಾಲೆಯ ಹಳೆಯ ವಿದ್ಯಾರ್ಥಿ ಮಂಗಳೂರು ವಿಭಾಗದ ಆಂತರಿಕ ಭದ್ರತೆಯ ಡಿಐಜಿ ಎ.ಎನ್.ಪ್ರಕಾಶ್‌ಗೌಡ ಮಾತನಾಡಿ, ಗುರುವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಶಾಲೆಯ ಎಲ್ಲ ಗುರುಗಳು ನಮ್ಮ ಭವಿಷ್ಯಕ್ಕಾಗಿ ಶ್ರಮಿಸಿದ್ದಾರೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.
ಬಿಇಒ ಧನಂಜಯ ಮಾತನಾಡಿ, ಗುರುವಂದನಾ ಕಾರ್ಯಕ್ರಮ ಎಂದರೆ ನಮಗೆ ವಿದ್ಯೆ, ಸಂಸ್ಕಾರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವ ಹಾಗೂ ಕೃತಜ್ಞತೆ ಅರ್ಪಿಸುವ ಸುಂದರವಾದ ವೇದಿಕೆಯಾಗಿದೆ. ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ತಮಗೆ ಪಾಠ ಮಾಡಿದ ಹಿರಿಯ ಶಿಕ್ಷಕರನ್ನು ನೆನಪಿಸಿಕೊಂಡು ಸನ್ಮಾನಿಸುವುದೇ ಗುರುವಂದನಾ ಕಾರ್ಯಕ್ರಮ ಮುಖ್ಯ ಉದ್ದೇಶವಾಗಿದೆ ಎಂದರು.