ಉದ್ಯೋಗ ಭದ್ರತೆ, 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಗೌರವಧನ ಹೆಚ್ಚಳ
ನಿವತ್ತಿ ನಂತರ ನೀಡುವ ಇಡುಗಂಟನ್ನು ಸೇವಾ ವರ್ಷ ಆಧಾರದಲ್ಲಿ ಕನಿಷ್ಟ 25 ಲಕ್ಷ ರೂ ನೀಡುವ ನಿರ್ಧಾರ ಮಾಡಲಿ
ಮಂಡ್ಯ: ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿ ಮಾಡಬೇಕೆಂದು ರಾಜ್ಯಸರ್ಕಾರವನ್ನು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ನಾಗರಾಜು ಒತ್ತಾಯಿಸಿದರು.
ನಮ್ಮ ಸೇವೆಯನ್ನು ಗಮನದಲ್ಲಿಟ್ಟು ಉದ್ಯೋಗ ಭದ್ರತೆ, 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಗೌರವಧನ ಹೆಚ್ಚಳ, ನಿವತ್ತಿ ನಂತರ ನೀಡುವ ಇಡಿ ಗಂಟನ್ನು ಸೇವಾ ವರ್ಷ ಆಧಾರದಲ್ಲಿ ಕನಿಷ್ಟ 25 ಲಕ್ಷ ರೂ ನೀಡುವ ನಿರ್ಧಾರ ಕೈಗೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಯುಜಿಸಿ ಅಲ್ಲದ 1,500 ಅತಿಥಿ ಉಪನ್ಯಾಸಕರಿಗೆ ಪರ್ಯಾಯವಾಗಿ ಶೈಕ್ಷಣಿಕ ಸಂಯೋಕರ ಹುದ್ದೆ ನೀಡುವ ನಿರ್ಣಯದ ಹೆಜ್ಜೆಯಿಟ್ಟ ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಯುಜಿಸಿ ಮಾನದಂಡ ಅನುಸರಿಸಿ ಅತಿಥಿ ಉಪನ್ಯಾಸಕರ ಆಯ್ಕೆ ನಡೆಸುವಂತೆ ನ್ಯಾಯಾಲಯದ ತೀರ್ಪು ಬಂದ ನಂತರ ದಶಕಗಳ ಕಾಲ ಸೇವೆ ಸಲ್ಲಿಸಿದ ಸಾವಿರಾರು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವಂತಾಗಿತ್ತು. ಈ ಸಂಬಂಧ ರಾಜ್ಯದ ವಿವಿಧೆಡೆ ಹೋರಾಟ ನಡೆಸಲಾಗಿತ್ತು ಎಂದರು.
ಶಾಸಕರ ಸಮ್ಮೇಳನದಲ್ಲಿ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಾಲೋಚನೆ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕಲಾಗಿತ್ತು. ಎಲ್ಲ ಪ್ರಯತ್ನಗಳ ಫಲವಾಗಿ ಸೇವಾ ಜೇಷ್ಠತೆಯ ಮಾನದಂಡ ಅನುಸರಿಸಿ ಸೇವೆಯಲ್ಲಿ ಬಳಸಿಕೊಳ್ಳಲು ಗೌರವಧನ ನಿಗದಿಪಡಿಸಿ ಆರ್ಥಿಕ ಅನುಮೋದನೆ ನೀಡಿ ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ತೀರ್ಮಾನದ ಹೆಜ್ಜೆ ಇಡಲಾಗಿದೆ ಎಂದು ವಿವರಿಸಿದರು.
ರಾಜ್ಯ ಸಂಚಾಲಕ ಮಹೇಶ್, ಮಹಿಳಾ ಕಾರ್ಯದರ್ಶಿ ಎಸ್.ಹರ್ಷಿತಾ, ಜಿಲ್ಲಾ ಉಪಾಧ್ಯಕ್ಷ ಟಿ.ಜೆ.ದಿಲೀಪ್, ಜಿಲ್ಲಾ ಕಾರ್ಯದರ್ಶಿ ಡಾ.ರಂಜನ್ ಸತ್ಯದಾಸ್, ರಾಷ್ಟ್ರೀಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಲಿಂಗರಾಜು ಇದ್ದರು.