ಗಿಡ ಬೆಳೆಸಿದರೆ ಜೀವ ಸಂಕುಲಕ್ಕೆ ನೆಮ್ಮದಿ

ಕರಿಘಟ್ಟ ಬೆಟ್ಟದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು ರೈತರಿಗೆ ಸಸಿಗಳನ್ನು ವಿತರಿಸಿದರು. ಡಿ.ರಘು, ಚೇತನಾ ಯಾದವ್, ಮಹದೇವಸ್ವಾಮಿ ಇತರರು ಇದ್ದರು.
ಕರಿಘಟ್ಟ ಬೆಟ್ಟದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು ರೈತರಿಗೆ ಸಸಿಗಳನ್ನು ವಿತರಿಸಿದರು. ಡಿ.ರಘು, ಚೇತನಾ ಯಾದವ್, ಮಹದೇವಸ್ವಾಮಿ ಇತರರು ಇದ್ದರು.
Published on
ಶ್ರೀರಂಗಪಟ್ಟಣ: ಪರಿಸರಕ್ಕೆ ನಾವು ಏನೂ ಕೊಡುಗೆ ನೀಡದಿದ್ದರೂ ಪರವಾಗಿಲ್ಲ, ಆದರೆ ಅದನ್ನು ಮಾಲಿನ್ಯಗೊಳಿಸದೇ ಇದ್ದರೆ ಅದೇ ನಮ್ಮಿಂದ ಸಲ್ಲುವ ನಿಜವಾದ ಕೊಡುಗೆ ಎಂದು ಶಾಸಕ, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನ ಕರಿಘಟ್ಟ ಬೆಟ್ಟದ ಸಾಲುಮರದ ತಿಮ್ಮಕ್ಕ ಹಸಿರ ಉದ್ಯಾನವನದಲ್ಲಿ ಮಂಗಳವಾರ ಅರಣ್ಯ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ, ನ್ಯೂ ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆ ಮತ್ತು ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಮರ ಕಡಿದರೆ ಮನುಕುಲಕ್ಕೆ ಮರಣ. ಗಿಡ ಬೆಳೆಸಿದರೆ ಜೀವ ಸಂಕುಲಕ್ಕೆ ಹಸಿರು ತೋರಣ ಎಂಬುದೇ ನಮ್ಮ ಧ್ಯೇಯವಾಗಬೇಕಿದೆ. ನಾವು ಆಚರಿಸುತ್ತಿರುವ ವನ ಮಹೋತ್ಸವ ಕೇವಲ ಈ ದಿನಕ್ಕೆ ಮಾತ್ರ ಸೀಮಿತವಲ್ಲ. ಪ್ರಸ್ತುತ ನಮಗೆ ಕುಡಿಯಲು ಶುದ್ಧವಾದ ನೀರು, ಉಸಿರಾಡಲು ಒಳ್ಳೆಯ ಗಾಳಿ ಸಿಗುತ್ತಿಲ್ಲ. ಹವಾಮಾನ ವೈಪರೀತ್ಯದಿಂದ ತಾಪಮಾನ ಹೆಚ್ಚುತ್ತಿದೆ ಎಂದರು.
ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ನಮ್ಮ ಉಳಿವಿಗಾಗಿ ಪ್ರಕೃತಿ ಉಳಿಸುವ ಬದ್ಧತೆ ತೋರಬೇಕಾಗಿದೆ. ಒಂದು ಮಗು, ಒಂದು ಸಸಿ ಧ್ಯೇಯದಂತೆ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪ್ರೀತಿಯಿಂದ ಪೋಷಿಸಬೇಕು ಎಂದರು.
ಅರಣ್ಯ ಉಪಸಂರಕ್ಷಣಾಧಿಕಾರಿ ಡಿ.ರಘು ಮಾತನಾಡಿ, ನಮ್ಮ ರಾಜ್ಯದಲ್ಲಿ ಅರಣ್ಯ ಪ್ರಮಾಣ ಕೇವಲ ಶೇ. 20ರಷ್ಟಿದೆ. ಇದು ಶೇ.33% ರಷ್ಟಾದರೂ ಇರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ದುಡಿಯಬೇಕಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ತಹಸೀಲ್ದಾರ್ ಚೇತನಾ ಯಾದವ್ ಮಾತನಾಡಿ, ಪರಿಸರ ಉಳಿವಿಗೆ ಸಲಹೆ ನೀಡಿದರು. ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಭಾಷಣ ಮಾಡಿದ ವಿದ್ಯಾರ್ಥಿಗಳಿಗೆ ಶಾಸಕರು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಬಳಿಕ ರೈತರಿಗೆ ಅರಣ್ಯ ಇಲಾಖೆ ವತಿಯಿಂದ ಗಂಧ ಮತ್ತು ತೇಗದ ಸಸಿಗಳನ್ನು ವಿತರಿಸಲಾಯಿತು. ಬೆಟ್ಟದ ಉದ್ಯಾನವನದಲ್ಲಿ ಶಾಸಕರಿಂದ ಸಸಿ ನೆಟ್ಟು ನೀರುಣಿಸಿ ಬೀಜದುಂಡೆಗಳನ್ನು ವಾತವರಣದಲ್ಲಿ ಎಸೆಯುವ ಮೂಲಕ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಪರಿಸರ ಕಾಳಜಿಯನ್ನು ಮೆರೆದರು.
ಪರಿಸರ ರಮೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ, ತಾಲೂಕು ಪಂಚಾಯಿತಿ ಇಒ ಚಂದ್ರು, ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್, ಆರ್ ಎಫ್ ಒ ನಾಗರಾಜು, ಶ್ರೀರಂಗಪಟ್ಟಣ ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್, ಕೆ.ಶೆಟ್ಟಹಳ್ಳಿ ಗ್ರಾಪಂ ಪಿಡಿಒ ಡಾ.ಶೋಭರಾಣಿ, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ ಮುಖಂಡರಾದ ಶ್ರೀನಿವಾಸ ಅಗ್ರಹಾರ ಕುಮಾರ್, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಗಂಗಾಧರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net