ಮಂಡ್ಯ: ಗ್ರಾಮ ಪಂಚಾಯಿತಿ ಉಳಿಸಿಕೊಂಡಿರುವ ಬಾಕಿ ವೇತನ ಪಾವತಿ ಮಾಡುವುದು, ಸರ್ಕಾರದ ಮತ್ತು ಆರ್‌ಡಿಪಿಆರ್ ಅಧಿಕಾರಿಗಳ ವಿಳಂಬ ನೀತಿ ಬಿಡಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘ, ಸಿಐಟಿಯು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್‌ಎಂ.ವಿ.ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಬಳಿಕ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು. ನಂತರ ಜಿ.ಪಂ ಉಪಕಾರ್ಯದರ್ಶಿ ಡಾ.ಶಿವಲಿಂಗಯ್ಯ ಅವರ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗ್ರಾ.ಪಂ.ನಲ್ಲಿ ಜೇಷ್ಠತಾ ಪಟ್ಟಿ ತಯಾರಿಸಿ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಪಂಚಾಯಿತಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿದ್ಯಾರ್ಹತೆ ಕೊರತೆಯಿಂದ ಉಳಿದಿರುವ ಎಲ್ಲ ನೌಕರರನ್ನು ಅನುಮೋದನೆಗೊಳಿಸಬೇಕು. ವಿದ್ಯಾರ್ಹತೆ ಇರುವ ಬಿಲ್ ಕಲೆಕ್ಟರ್ ಮತ್ತು ಡಿಇಒಗಳ ಅನುಮೋದನೆ ನೀಡಬೇಕು. ನಮ್ಮ ಜಿಲ್ಲೆಯಲ್ಲಿ ಭವಿಷ್ಯ ನಿಧಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಉಳಿದಿರುವ ಬಾಕಿ ವೇತನ ನೀಡಬೇಕು. ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಅಥವಾ ಮರಣ ಹೊಂದಿದ ನೌಕರರಿಗೆ ಉಪಧನ ನೀಡಬೇಕು. ತಾವೇ ಒಪ್ಪಿಕೊಂಡಿರುವ ಪ್ರಕಾರ 5,000 ರೂಗಳನ್ನು ಎಲ್ಲ ನೌಕರರಿಗೆ ವೇತನ ಹೆಚ್ಚಳ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಬೇಕು. ನೌಕರರು ನಿವೃತ್ತಿ, ನಿಧನ ಹೊಂದಿದರೆ ಅವರಿಗೆ ಇಡಗಂಟು 6 ಲಕ್ಷ ರೂ ನೀಡಬೇಕು ಎಂದು ಒತ್ತಾಯಿಸಿದರು.
ನೌಕರರ ಜನ್ಮ ದಿನಾಂಕವನ್ನು ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರದಲ್ಲಿರುವ ದಿನಾಂಕವನ್ನು ಪಂಚತಂತ್ರ 2.0 ನಲ್ಲಿ ನಮೂದಿಸಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು. ತಾವು ಭರವಸೆ ನೀಡಿದ ಭಾಗವಾಗಿ ಸ್ವಚ್ಛವಾಹಿನಿ ನೌಕರರ ಸಭೆಯನ್ನು ಮಾಡಿ ಅವರ ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು. ಪ್ರತಿಯೊಂದು ಪಂಚಾಯತಿಗೆ ದ್ವಿತಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದರು.
ಕಳೆದ 18-20 ವರ್ಷದಿಂದ ಡೇಟಾ ಎಂಟ್ರಿ ಆಪರೇಟರ್‌ಗಳಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅನುಮೋದನೆ ನೀಡಬೇಕು. 2ನೇ ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ ಆಗಬೇಕು. ಈಗಾಗಲೇ ಆರೋಗ್ಯದ ಕುರಿತು ಸಿಬ್ಬಂದಿ ಮಾಹಿತಿಗಾಗಿ ವಿವರ ಕಳಿಸಲಾಗಿದೆ. ಅದರಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ, ಕಾರ್ಮಿಕರ ಮಾಹಿತಿ ನೀಡಲು ತಿಳಿಸಲಾಗಿದೆ. ಆದರೆ, ಇದರಲ್ಲಿ ಪಂಚಾಯಿತಿ ನೌಕರರೆಂದು ಮಾಹಿತಿಯಿಲ್ಲ. ಇದನ್ನು ಸರಿಪಡಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಪಡಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಯದರ್ಶಿ ಎ.ಬಿ.ಶಶಿಕಲಾ, ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ರಾಮಕೃಷ್ಣ, ಜಿಲ್ಲಾ ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಆನಂದ್‌ರಾವ್ ಇತರರಿದ್ದರು.