ಮಹಿಳಾ ಸಹಕಾರ ಸಂಘದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ

ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಮದ ಡೇರಿ ಕಾರ್ಯದರ್ಶಿ ಹುದ್ದೆಗೆ ಹೊರ ಊರಿನವರನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಸಹಕಾರ ಸಂಘಗಳ ನಿಬಂಧಕರ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಎ.ಎಲ್.ಕೆಂಪೂಗೌಡ, ವೈ.ಪಿ.ಮಂಜುನಾಥ್ ಇತರರಿದ್ದರು.
ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಮದ ಡೇರಿ ಕಾರ್ಯದರ್ಶಿ ಹುದ್ದೆಗೆ ಹೊರ ಊರಿನವರನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಸಹಕಾರ ಸಂಘಗಳ ನಿಬಂಧಕರ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಎ.ಎಲ್.ಕೆಂಪೂಗೌಡ, ವೈ.ಪಿ.ಮಂಜುನಾಥ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮನ್‌ಮುಲ್ ಉಪ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ
ಪಾಂಡವಪುರ: ತಾಲೂಕಿನ ಹಳೇಬೀಡು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಪ್ರಭಾರಿ ಕಾರ್ಯದರ್ಶಿಯ ಆಯ್ಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೆ, ಹೊರಗ್ರಾಮದರನ್ನು ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಹಾಗೂ ಮನ್‌ಮುಲ್ ಉಪ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಹಳೇಬೀಡು ತಿಮ್ಮೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕಳೆದ ಒಂದು ವರ್ಷದ ಹಿಂದೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ನಿವೃತ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ರಜೆ ದಿನವಾದ ಭಾನುವಾರ ತುರ್ತು ಸಭೆ ನಡೆಸಿ ಪ್ರಭಾರ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗಿದೆ. ಮನ್‌ಮುಲ್ ಉಪ ಕಚೇರಿಯ ಮಾರ್ಗ ವಿಸ್ತರಣಾಧಿಕಾರಿ ಪ್ರಜ್ವಲ್ ಅವರು ಆಡಳಿತ ಮಂಡಳಿ ಮೇಲೆ ಪ್ರಭಾವ ಬಳಸಿ, ಸ್ಥಳೀಯರಲ್ಲದ ಹೊರ ಊರಿನ ಎಚ್.ಎನ್,ಅಶ್ವಿನಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಅರ್ಜಿ ಸಲ್ಲಿಸಿದ್ದ ಸ್ಥಳೀಯರು ಸೇರಿದಂತೆ ಪದವೀಧರ ಮಹಿಳೆಯರನ್ನು ಪರಿಗಣಿಸದೆ, ಆಡಳಿತ ಮಂಡಳಿಯ ಕೆಲ ನಿರ್ದೇಶಕರಿಗೆ ಆಮಿಷವೊಡ್ಡಿ ಕಾರ್ಯದರ್ಶಿಯನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ ಆಯ್ಕೆ ಕುರಿತು ನೋಟಿಸ್ ಬೋರ್ಡ್‌ನಲ್ಲಿ ಯಾವುದೇ ಮಾಹಿತಿ ನೀಡದೆ ಈ ಆಯ್ಕೆ ನಡೆದಿದೆ ಎಂದು ಆರೋಪಿಸಿದರು.
ಸಂಘದ ಬೈಲಾ 18ರ ಪ್ರಕಾರ, ನಿಯಮಾವಳಿಯಂತೆ ಸಂಘದ ಕಾರ್ಯದರ್ಶಿಯನ್ನು ಆಯ್ಕೆ ಮಾಡಬೇಕಿದೆ. ಆದರೆ, ಮಾರ್ಗ ವಿಸ್ತರಣಾಧಿಕಾರಿ ಪ್ರಜ್ವಲ್, ಪ್ರಭಾವಿ ರಾಜಕಾರಣಿಗೆ ಒತ್ತಡಕ್ಕೆ ಮಣಿದು, ಕಾರ್ಯದರ್ಶಿಯನ್ನು ಆಯ್ಕೆಮಾಡಿದ್ದಾರೆ. ಜತೆಗೆ ಸಭಾ ನಿರ್ಣಯ ಪುಸ್ತಕಕ್ಕೆ ಮಾರ್ಗ ವಿಸ್ತರಣಾಧಿಕಾರಿ ತಮ್ಮ ಸಹಿ ಹಾಕದೆ, ಉದ್ದಟತನ ಪ್ರದರ್ಶಿಸಿದ್ದಾರೆ. ಹಾಗಾಗಿ ಮಾರ್ಗ ವಿಸ್ತರಣಾಧಿಕಾರಿಯನ್ನು ಅಮಾನತ್ತುಗೊಳಿಸಬೇಕು. ಕಾರ್ಯದರ್ಶಿ ಆಯ್ಕೆಯನ್ನು ತಡೆಹಿಡಿಯಬೇಕು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಆರ್.ನಾಗಭೂಷಣ್ ಅವರನ್ನು ಒತ್ತಾಯಿಸಿದರು.
ಬಳಿಕ ಮನ್‌ಮುಲ್ ಉಪ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಮಾರ್ಗ ವಿಸ್ತರಣಾಧಿಕಾರಿ ಪ್ರಜ್ವಲ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅಶೋಕ್, ಮಹಿಳಾ ಹೋರಾಟಗಾರ್ತಿ ಅರಳಕುಪ್ಪೆ ರೂಪಾ, ಮುಖಂಡರಾದ ಹಳೇಬಿಡು ತಿಮ್ಮೇಗೌಡ, ಹಿರೇಮರಳಿ ಶಿವಕುಮಾರ್, ಹೊಸಕೋಟೆ ಸುರೇಶ್. ವೈ.ಜಿ.ರಘು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net