ಮದ್ದೂರು ತಾಲೂಕಿನ ಆಲೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆ ಯಲ್ಲಿ ಶಾಸಕ ಕೆ.ಎಂ.ಉದಯ್ ಅಹವಾಲು ಸ್ವೀಕರಿಸಿದರು. ಎಂ.ಕೆ.ಹರೀಶ್‌ಬಾಬು, ತೈಲೂರು ಚಲುವರಾಜು, ಪಿ.ಸಂದರ್ಶ, ಉದಯ್, ಸಿಪಾಯಿ ಶ್ರೀನಿವಾಸ್, ಪುಟ್ಟರಾಮು, ಕರಿಯಪ್ಪ, ಶಿವಣ್ಣ, ರಾಜು, ಜಗದೀಶ್, ಸುಪ್ರೀತ್ ಇತರರಿದ್ದರು.
ಪಕ್ಷದಲ್ಲಿ ನಿಷ್ಟೆ ಪ್ರಮಾಣಿಕತೆಯಿಂದ ಕೆಲಸ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನ-ಮಾನ ಸಿಗಲಿದ್ದು, ಕಾರ್ಯಕರ್ತರು, ಮುಖಂಡರು ಶಿಸ್ತಿನ ಸಿಪಾಯಿಗಳಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯ ತಿಳಿಸಿದರು.
ತಾಲೂಕಿನ ಆಲೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಕುಂದು ಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದು ವರ್ಗದ ಜನರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ವಾರ್ಷಿಕ 52 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದೆ ಎಂದು ಹೇಳಿದರು.
ಮುಂದಿನ ಡಿಸೆಂಬರ್‌ನಲ್ಲಿ ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂ. ಸೇರಿದಂತೆ ಸ್ಥಳಿಯ ಸಂಘ-ಸಂಸ್ಥೆಗಳ ಚುನಾವಣೆಗಳು ಎದುರಾಗಲಿದ್ದು, ಇದನ್ನರಿತು ಕಾರ್ಯಕರ್ತರು, ಮುಖಂಡರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ತಾಲೂಕಿನಾದ್ಯಂತ ಪ್ರತಿ ಗ್ರಾಮದಲ್ಲೂ ಅಭಿವೃದ್ಧಿಯ ಪರ್ವ ಮುಂದುವರಿದಿದ್ದು, ಮುಂದಿನ 6 ತಿಂಗಳೊಳಗಾಗಿ ಶೇ.95 ರಷ್ಟು ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಥಮ ಆದ್ಯತೆ ನೀಡುವ ಮೂಲಕ ಹಲವು ವರ್ಷಗಳ ಬಹುದಿನದ ಬೇಡಿಕೆಯನ್ನು ಈಡೇರಿಸದಂತಾಗಲಿದೆ ಎಂದರು.
ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು, ಕೆರೆ-ಕಟ್ಟೆಗಳ ಪುನಃಶ್ವೇತನ, ನಾಲೆಗಳ ಆಧುನಿಕರಣ, ಏತ ನೀರಾವರಿ ಪುನಃಶ್ವೇತನ ಇನ್ನಿತರ ಹತ್ತು ಹಲವು ಕಾಮಗಾರಿಗಳಿಗೆ ಪ್ರಥಮ ಆದ್ಯತೆ ನೀಡಲು ಕ್ರಮವಹಿಸಲಾಗಿದೆ ಎಂದರು.
ಪ್ರತಿ ಗ್ರಾಮದಲ್ಲೂ ಯುವಕರನ್ನು ಸಂಘಟಿಸಿ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಭಾರತ್ ಜೋಡೊ ಸಂಘಟನೆಯನ್ನು ಜಾರಿಗೊಳಿಸಿದ್ದು, ಯುವಕ-ಯುವತಿಯರು ಹತ್ತಾರು ಚಟುವಟಿಕೆಯಲ್ಲಿ ಭಾಗವಹಿಸಿ ಪ್ರತಿ ವರ್ಷ ಸರ್ಕಾರ ನೀಡುವ ಹತ್ತು ಲಕ್ಷ ರೂ. ಸದುಪಯೋಗಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರತಿ ಬೂತ್ ಮಟ್ಟದಲ್ಲೂ ಪಕ್ಷವನ್ನು ಸಂಘಟಿಸಬೇಕೆಂಬ ಉದ್ದೇಶದಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯಕರ್ತರು, ಮುಖಂಡರ ಕುಂದು ಕೊರತೆ ಸಭೆ ಆಯೋಜಿಸಿ ಹಲವು ಸಮಸ್ಯೆ ಮತ್ತು ಭಿನ್ನಾಭಿಪ್ರಾಯ ಬಗೆಹರಿಸಿ ಚುನಾವಣೆ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಒಮ್ಮತದ ತೀರ್ಮಾನ ಕೈಗೊಳ್ಳಲು ಸದಸ್ಯರ ತಂಡ ರಚನೆ ಮಾಡಲಾಗಿದೆ. ಪಕ್ಷ ಸಂಘಟನೆಗೆ ಈಗಿನಿಂದಲೇ ಕ್ರಿಯಾ ಯೋಜನೆ ರೂಪಿಸಬೇಕು ಎಂದರು.
ಮನ್‌ಮುಲ್ ಅಧ್ಯಕ್ಷ ಎಂ.ಕೆ.ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ತೈಲೂರು ಚಲುವರಾಜು, ನಿರ್ದೇಶಕ ಪಿ.ಸಂದರ್ಶ, ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ್, ಮುಖಂಡರಾದ ಸಿಪಾಯಿ ಶ್ರೀನಿವಾಸ್, ಪುಟ್ಟರಾಮು, ಕರಿಯಪ್ಪ, ಶಿವಣ್ಣ, ರಾಜು, ಜಗದೀಶ್, ಸುಪ್ರೀತ್ ಇತರರಿದ್ದರು.