ಕೃಷಿ ವಿವಿಗೆ ಜರ್ಮನಿ ಸಂಸತ್ ನಿಯೋಗ ಭೇಟಿ: ವಿವಿಧ ಕ್ಷೇತ್ರದ ಪರಸ್ಪರ ಸಹಕಾರ ಸಾಧ್ಯತೆಯ ಚರ್ಚೆ ! German parliamentary delegation

ಜರ್ಮನಿಯ ಬವೇರಿಯಾ ರಾಜ್ಯದ ಉನ್ನತ ಮಟ್ಟದ ಸಂಸತ್ ನಿಯೋಗ ಕರ್ನಾಟಕ ಪ್ರವಾಸದ ಅಂಗವಾಗಿ ತಾಲೂಕಿನ ವಿ.ಸಿ ಫಾರ್ಮ್‌ನಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿತು.
German parliamentary delegation
ಮಂಡ್ಯ ತಾಲೂಕು ವಿ.ಸಿ ಫಾರ್ಮ್‌ನಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಜರ್ಮನಿಯ ಬವೇರಿಯಾ ರಾಜ್ಯದ ಉನ್ನತ ಮಟ್ಟದ ಸಂಸತ್ ನಿಯೋಗ ಭೇಟಿ ನೀಡಿತು.
Published on

ಮಂಡ್ಯ: ಜರ್ಮನಿಯ ಬವೇರಿಯಾ ರಾಜ್ಯದ ಉನ್ನತ ಮಟ್ಟದ ಸಂಸತ್ ನಿಯೋಗ ಕರ್ನಾಟಕ ಪ್ರವಾಸದ ಅಂಗವಾಗಿ ತಾಲೂಕಿನ ವಿ.ಸಿ ಫಾರ್ಮ್‌ನಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿತು. ಅಂತೆಯೇ ಕೃಷಿ ಶಿಕ್ಷಣ, ಸಂಶೋಧನೆ, ನವೋದ್ಯಮ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಸಾಧ್ಯತೆಗಳ ಕುರಿತು ಚರ್ಚಿಸಿತು.

ಬವೇರಿಯಾ ರಾಜ್ಯ ಸಂಸತ್ ಸದಸ್ಯೆ ಹಾಗೂ ಫೆಡರಲ್, ಯುರೋಪಿಯನ್ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ವಕ್ತಾರೆ ಉಲ್ರಿಕೆ ಮ್ಯುಲರ್, ಸಂಸತ್ ಸದಸ್ಯೆ ಹಾಗೂ ಪರಿಸರ ಮತ್ತು ಗ್ರಾಹಕ ರಕ್ಷಣಾ ನೀತಿಯ ವಕ್ತಾರೆ ಮರೀನಾ ಯಾಕೋಬ್, ಸಂಸತ್ ಸದಸ್ಯರಾದ ನಿಕೋಲಾಸ್ ಕ್ರೌಸ್, ಕ್ರಿಸ್ಟಿಯನ್ ಲಿಂಡಿಂಗರ್ ಮತ್ತು ಬೆನ್ನೋ ಝಿಯರರ್ ಅವರನ್ನು ವಿವಿಯ ಕುಲಪತಿ ಡಾ.ಕೆ.ಸಿ. ನಾರಾಯಣಸ್ವಾಮಿ ಅವರು ಹಿರಿಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು.

ಕೃಷಿ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳು, ಸಂಶೋಧನಾ ಸಾಮರ್ಥ್ಯ, ವಿಸ್ತರಣಾ ಚಟುವಟಿಕೆಗಳು ಹಾಗೂ ರೈತಪರ ಕಾರ್ಯಗಳ ಕುರಿತು ನಿಯೋಗಕ್ಕೆ ಪರಿಚಯಿಸಲಾಯಿತು. ಹವಾಮಾನ-ಸಹಿಷ್ಣು ಕೃಷಿ, ಸುಸ್ಥಿರ ಹಾಗೂ ನೈಸರ್ಗಿಕ ಕೃಷಿ, ಕೃಷಿ ಜೈವಿಕ ತಂತ್ರಜ್ಞಾನ, ಆಹಾರ ತಂತ್ರಜ್ಞಾನ, ಅರಣ್ಯ ವಿಜ್ಞಾನ, ಮೌಲ್ಯವರ್ಧನೆ, ಕೃಷಿ ಯಾಂತ್ರೀಕರಣ ಹಾಗೂ ಡಿಜಿಟಲ್ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ಹೊಂದಿರುವ ಪರಿಣತಿಯ ಕುರಿತು ಚರ್ಚಿಸಲಾಯಿತು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಬವೇರಿಯಾದ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ಬೋಧಕ ಮತ್ತು ವಿದ್ಯಾರ್ಥಿ ವಿನಿಮಯ, ಜಂಟಿ ಸಂಶೋಧನೆ, ಜ್ಞಾನ ಹಂಚಿಕೆ, ಸಾಮರ್ಥ್ಯ ವೃದ್ಧಿ ಹಾಗೂ ನವೋದ್ಯಮ ಕ್ಷೇತ್ರಗಳಲ್ಲಿ ಸಹಯೋಗ ಬೆಳೆಸುವ ಅವಕಾಶಗಳ ಕುರಿತು ಎರಡೂ ಕಡೆಯವರು ಅಭಿಪ್ರಾಯಗಳನ್ನು ಹಂಚಿಕೊಂಡರು. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಸ್ಟಾರ್ಟ್‌ಅಪ್‌ಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನೂ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ, ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಆಹಾರ ಮತ್ತು ಪೌಷ್ಟಿಕ ಭದ್ರತೆ ಹಾಗೂ ಬದಲಾಗುತ್ತಿರುವ ಮಾರುಕಟ್ಟೆಯ ಅಗತ್ಯಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಹಕಾರ, ಬಹುಶಿಸ್ತೀಯ ಸಂಶೋಧನೆ ಮತ್ತು ಕೈಗಾರಿಕಾ ಸಹಭಾಗಿತ್ವ ಅಗತ್ಯವಾಗಿದೆ ಎಂದು ತಿಳಿಸಿದರು.

ಬವೇರಿಯಾ ಸಂಸತ್ ನಿಯೋಗದ ಈ ಭೇಟಿ ಕರ್ನಾಟಕ ಮತ್ತು ಬವೇರಿಯಾ ನಡುವಿನ ಶೈಕ್ಷಣಿಕ, ಸಂಶೋಧನಾ ಹಾಗೂ ನವೋದ್ಯಮ ಸಹಭಾಗಿತ್ವಕ್ಕೆ ಹೊಸ ಅವಕಾಶಗಳನ್ನು ತೆರೆದಿದ್ದು, ಕೃಷಿ ಕ್ಷೇತ್ರದಲ್ಲಿ ಪರಸ್ಪರ ಜ್ಞಾನ ಮತ್ತು ಅನುಭವ ಹಂಚಿಕೆಗೆ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net