ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮಂಡ್ಯ, ಯುವ ರೆಡ್‌ಕ್ರಾಸ್ ಘಟಕದಿಂದ ಆಯೋಜನೆ
ಮಂಡ್ಯ: ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರೆಡ್‌ಕ್ರಾಸ್ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮಂಡ್ಯ, ಯುವ ರೆಡ್‌ಕ್ರಾಸ್ ಘಟಕ ಹಾಗೂ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಜಿನೀವಾ ಒಪ್ಪಂದ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಾದ್ಯಂತ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಆ.12 ರಂದು ಜಿನೀವಾ ಒಪ್ಪಂದ ದಿನವನ್ನು ಆಚರಿಸಲಾಗುತ್ತಿದೆ. ಯುದ್ಧದ ಸಂದರ್ಭದಲ್ಲಿ ಸೆರೆ ಸಿಕ್ಕ ಸೈನಿಕರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಜಿನೀವಾ ಒಪ್ಪಂದ ಹೇಳುತ್ತದೆ. ಗಾಯಗೊಂಡ ಸೈನಿಕರು, ಯುದ್ಧ ಭೂಮಿಯ ಸುತ್ತಮುತ್ತ ಸೆರೆ ಸಿಕ್ಕ ಜನರ ಹಕ್ಕುಗಳ ರಕ್ಷಣೆ ಬಗ್ಗೆ ಹಲವು ಮಾರ್ಗಸೂಚಿಗಳನ್ನು ಒಳಗೊಂಡಿದೆ ಎಂದರು.
ರೆಡ್‌ಕ್ರಾಸ್ ಸಂಸ್ಥೆಗೆ ಮೂರು ಬಾರಿ ನೋಬೆಲ್ ಶಾಂತಿ ಪುರಸ್ಕಾರ ಬಂದಿದೆ. ಪ್ರಪಂಚದಲ್ಲಿ ಎಲ್ಲಿ ಯುದ್ಧ ನಡೆದರೂ ಆಹಾರ, ಔಷಧ, ಸ್ವಯಂ ಸೇವಕರನ್ನು ರೆಡ್‌ಕ್ರಾಸ್ ಸಂಸ್ಥೆ ಕಳುಹಿಸುತ್ತದೆ. ಯುವ ರೆಡ್‌ಕ್ರಾಸ್ ವತಿಯಿಂದ ವಿದ್ಯಾರ್ಥಿಗಳು ಸೇವೆ ಮಾಡಬೇಕು. ರಕ್ತದಾನ ಶಿಬಿರ ಮಾಡಿದರೂ ಅದು ಒಂದು ದೊಡ್ಡ ಸೇವೆ. ವ್ಯಕ್ತಿ ವಿಕಸನ ಹಾಗೂ ಸಮಾಜ ವಿಕಸನಕ್ಕೆ ಪೂರಕ ವಾಗಿರುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ಕೆ.ಗುರುರಾಜ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಪ್ರೊ.ಎಂ.ವಿ.ಶೋಭಾ, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ನವೀನ್‌ಕುಮಾರ್, ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಕೆ.ಎಂ.ಮಹೇಶ್, ಡಾ.ಶಿವಕುಮಾರ್, ಭಾಸ್ಕರ್ ಇತರರಿದ್ದರು.