ಡಿಸಿ ವಿರುದ್ಧ ಗೆಜ್ಜಲಗೆರೆ, ಗೊರವನಹಳ್ಳಿ ಗ್ರಾಮಸ್ಥರ ಆಕ್ರೋಶ
ನಗರಸಭೆಯ ಬಜೆಟ್‌ನ ಕರಡು ಪ್ರತಿಗಳನ್ನು ಸುಡುವ ಮೂಲಕ ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು. ಸುನಂದಾ ಜಯರಾಮು, ಜಿ.ಪಿ.ಯೋಗೇಶ್, ಮೋಹನ್, ಲಿಂಗಪ್ಪಾಜಿ, ವೀರಪ್ಪ, ಶಂಕರ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮದ್ದೂರು ನಗರಸಭೆಯ ಬಜೆಟ್‌ನ ಕರಡು ಪ್ರತಿ
ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮಸ್ಥರು ಸುಡುವ
ಮದ್ದೂರು: ಇತ್ತೀಚೆಗೆ ಮಂಡನೆಯಾದ ಮದ್ದೂರು ನಗರಸಭೆಯ ಬಜೆಟ್‌ನ ಕರಡು ಪ್ರತಿಗಳನ್ನು ತಾಲೂಕಿನ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮಸ್ಥರು ಸುಡುವ ಮೂಲಕ ಗ್ರಾಮ ಪಂಚಾಯಿತಿಗಳ ಆವರಣದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಗೆಜ್ಜಲಗೆರೆಯ ಗ್ರಾಪಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಹಾಗೂ ಮಹಿಳೆಯರು, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ನಾಯಕಿ ಸುನಂದಾ ಜಯರಾಮು ಮಾತನಾಡಿ, 4 ಗ್ರಾಪಂಗಳನ್ನು ನಗರಸಭೆಗೆ ಸೇರ್ಪಡೆ ಮಾಡಿರುವ ವಿಚಾರ ನ್ಯಾಯಾಲಯದಲ್ಲಿದ್ದರೂ ಕಾನೂನು ಬಾಹಿರವಾಗಿ ಮದ್ದೂರು ನಗರಸಭೆಯಲ್ಲಿ 4 ಗ್ರಾಪಂಗಳನ್ನು ಒಳಪಟ್ಟಂತೆ ಬಜೆಟ್ ಮಂಡಿಸಿರುವುದು ಕಾನೂನು ಬಾಹಿರ ಎಂದು ಆರೋಪಿಸಿದರು.
ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಪಂಗಳ ಮುಂದೆ ಹಲವಾರು ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು ಹಾಗೂ ಗ್ರಾಮಸ್ಥರು ಈ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿರುವುದು ಗೊತ್ತಿದ್ದರೂ ಬಜೆಟ್ ಮಂಡಿಸಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ನಗರಸಭೆ ಕ್ಷೇತ್ರ ವಿಗಂಡಣೆ ಮಾಡಿ ವಾರ್ಡ್‌ವಾರು ಪ್ರದೇಶದ ವ್ಯಾಪ್ತಿಯನ್ನು ಗುರುತುಪಡಿಸಿ ಆದೇಶ ಮಾಡಿರುವುದು ಕೂಡ ಕಾನೂನು ಬಾಹಿರ. ಮೊದಲನೇಯದಾಗಿ ನಗರಸಭೆಗೆ 4 ಗ್ರಾಪಂಗಳನ್ನು ಸೇರ್ಪಡೆ ಮಾಡಿರುವ ವಿಚಾರವನ್ನೇ ನಾವು ಒಪ್ಪಿಕೊಳ್ಳದಿರುವಾಗ ಬಜೆಟ್ ಮಂಡನೆಯನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದ ಅವರು, ನಮ್ಮ ಗ್ರಾಮಗಳನ್ನು ಗ್ರಾಮಗಳನ್ನಾಗಿಯೇ ಉಳಿಸಬೇಕು. ಆ ನಿಟ್ಟಿನಲ್ಲಿ ನ್ಯಾಯ ಸಿಗುವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಿವೃತ್ತ ಯೋಧ ಹೊನ್ನಪ್ಪ, ತಾಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಮುಖಂಡರಾದ ಮೋಹನ್, ಲಿಂಗಪ್ಪಾಜಿ, ವೀರಪ್ಪ, ಶಂಕರ್, ಚಂದ್ರಶೇಖರ್, ದೀಪಾ, ಸತ್ಯಾವತಿ, ಶಾಂತಮ್ಮ, ಲಿಂಗಮ್ಮ, ಲಕ್ಷ್ಮಮ್ಮ ಇತರರಿದ್ದರು.