ಕೋಟಿ ರೂ ವೆಚ್ಚದಲ್ಲಿ ಮಾರುಕಟ್ಟೆ: ಶಾಸಕ ಪಿ.ರವಿಕುಮಾರ್ ಗಣಿಗ ಭರವಸೆ

ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಗಂಗಾ ಉತ್ಸವವನ್ನು ಶಾಸಕ ಪಿ.ರವಿಕುಮಾರ್ ಗಣಿಗ ಉದ್ಘಾಟಿಸಿದರು.
ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಗಂಗಾ ಉತ್ಸವವನ್ನು ಶಾಸಕ ಪಿ.ರವಿಕುಮಾರ್ ಗಣಿಗ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಗಂಗಾ ಉತ್ಸವ
  • ಜಿಲ್ಲಾ ಮಹಿಳಾ ಗಂಗಾಮತ(ಬೆಸ್ತರ) ಸಂಘದ ವತಿಯಿಂದ ಆಯೋಜನೆ
ಮಂಡ್ಯ: ನಗರದ ಕೆರೆಯಂಗಳದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಮೀನು ಮಾರುಕಟ್ಟೆಗೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಭರವಸೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಹಿಳಾ ಗಂಗಾಮತ(ಬೆಸ್ತರ) ಸಂಘದ ವತಿಯಿಂದ ಆಯೋಜಿಸಿದ್ದ ಗಂಗಾ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬಹುದಿನಗಳಿಂದ ಸುಸಜ್ಜಿತ ಮೀನು ಮಾರುಕಟ್ಟೆ ಬೇಕೆಂಬುವ ಬೇಡಿಕೆ ಇದೆ. ಅದನ್ನು ನಿರ್ಮಿಸಿಕೊಡುವ ದೃಷ್ಟಿಯಿಂದ ಈಗಾಗಲೇ ನಗರಸಭೆ ವತಿಯಿಂದ ಕೆರೆ ಅಂಗಳದಲ್ಲಿ ಸ್ಥಳ ಗುರುತಿಸಲಾಗಿದೆ. ಇನ್ನೂ ಅಂಬಿಗರ ಚೌಡಯ್ಯ ಅವರ ಪ್ರತಿಮೆ ನಿರ್ಮಾಣಕ್ಕೂ ನಗರ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಗಂಗಾಮತಸ್ಥರ ಉತ್ಸವ ಮಾಡುತ್ತಿದ್ದಾರೆ. ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಬೇರೆ ಕ್ಷೇತ್ರದಲ್ಲಿ ವ್ಯವಸ್ಥೆ ಹೇಗಿದೆಯೋ ಗೊತ್ತಿಲ್ಲ, ನನ್ನ ಕ್ಷೇತ್ರದಲ್ಲಿ ಹಾಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು ನಿಮ್ಮ ಸಮುದಾಯದವರೆ ಆಗಿದ್ದಾರೆ. ಜತೆಗೆ ಕೆಡಿಪಿ ಸದಸ್ಯರನ್ನಾಗಿ ಮಂಚಯ್ಯ ಅವರನ್ನು ಮಾಡಿದ್ದೇವೆ. ಬಡವರಿಗೆ ನಿವೇಶನ ಹಂಚುವ ಭೂ ಮಂಡಳಿಗೂ ಸದಸ್ಯರನ್ನಾಗಿ, ಸೆಸ್ಕಾಂ ಇಲಾಖೆಗೂ ನಿರ್ದೇಶಕರನ್ನಾಗಿ ನಿಮ್ಮ ಸಮುದಾಯದವರನ್ನೇ ನೇಮಕ ಮಾಡಲಾಗಿದೆ ಎಂದರು.
ಕ್ಷೇತ್ರದಲ್ಲಿ ಗಂಗಾಮತಸ್ಥರು ಎಲ್ಲಿ ಇದ್ದಾರೋ ಅಲ್ಲಿ ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ. ಕೋಣನಹಳ್ಳಿ, ಬೂದನೂರು ಕೆರೆ ಅಭಿವೃದ್ಧಿಗೆ 5 ಕೋಟಿ ರೂ ಅನುದಾನ ನೀಡಲಾಗಿದೆ. ಅಲ್ಲಿ ಕೆರೆ ಅಭಿವೃದ್ಧಿಯಾಗಿ ಮೀನು ಹೆಚ್ಚಾಗಿ ಸಿಗುತ್ತದೆ. ಹಾಗಾಗಿ ಮೀನು ಹಿಡಿಯುವವರಿಗೆ ಸಹಕಾರಿ ಆಗುತ್ತದೆ. ಇಷ್ಟೆಲ್ಲ ಆದರೂ ನಿಮ್ಮ ಸಮುದಾಯದ ಅಭಿವೃದ್ಧಿಗಾಗಿ ಎಂಬುದನ್ನು ತಿಳಿದುಕೊಳ್ಳಬೇಕು. ಜತೆಗೆ ಜಾತಿ ನೋಡದೇ ಅಭಿವೃದ್ಧಿ ಕಾರ್ಯಗಳನ್ನು ನನ್ನ ಕ್ಷೇತ್ರದಲ್ಲಿ ಮಾಡಿಕೊಂಡು ಬರುತ್ತಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಮಹಿಳಾ ಗಂಗಾ ಮತ(ಬೆಸ್ತರ) ಸಂಘದ ಅಧ್ಯಕ್ಷೆ ಸಿ.ಗಾಯಿತ್ರಿ ಕೃಷ್ಣಪ್ಪ ಮಾತನಾಡಿ, ನಮ್ಮ ಸಮದಾಯದವರಿಗೆ ರಾಜಕೀಯ ಸ್ಥಾನಮಾನ ಸಿಗಬೇಕು. ಮೀನು ಮಾರಾಟಕ್ಕೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಿಕೊಡಬೇಕು. ಸಮುದಾಯ ಭವನವನ್ನು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಜತೆಗೆ ಮಹಿಳಾ ಸಭಾ ಭವನನ್ನು ಕಟ್ಟಿಸಿಕೊಡಬೇಕು. ಇದರಿಂದ ನಮ್ಮ ಸಮುದಾಯದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಹಾವೇರಿ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರದ ಶಾಂತಭೀಷ್ಮಾ ಚೌಡಯ್ಯ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ಸಮಾಜ ಸೇವಕರಾದ ವರದರಾಜು, ಜಯರಾಮು, ಮುಖಂಡರಾದ ಕೃಷ್ಣಯ್ಯ, ಎಂ.ಶ್ರೀನಿವಾಸ್, ಉದಯ್ ಅಂಬಿಗ, ಬಿ.ಲಿಂಗಯ್ಯ, ಈರಯ್ಯ ಕನ್ನಲಿ, ಗಂಜಾಂ ಶಿವು, ಎಂ.ಪಿ.ಪೂರ್ಣಾನಂದ, ರಮೇಶ್ ಇತರರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕವಿತಾ ಚಿರುಕುನಯ್ಯ, ಮಂಜುಳಾ ಆಲದಹಳ್ಳಿ, ಎಸ್.ವರದಮ್ಮ, ಪ್ರಮೋದಿನಿ, ಎಲ್.ಭವಾನಿ, ಟಿ.ಸಿ.ವಸಂತ ಅವರನ್ನು ಅಭಿನಂದಿಸಲಾಯಿತು. ಅರುಣೋದಯ ಕಲಾತಂಡದಿಂದ ಸುಗಮ ಸಂಗೀತ, ಸವಿತಾ ಮತ್ತು ಚಿಕ್ಕಬೋರಯ್ಯ ತಂಡದಿಂದ ಪೂಜಾ ಕುಣಿತ, ಮಾರುತಿ ಪ್ರಸನ್ನ ನೇಗಿಲಯೋಗಿ ತಂಡದಿಂದ ಡೊಳ್ಳುಕುಣಿತ, ಚಿಕ್ಕಬೋರಯ್ಯ ಕಲಾತಂಡದ ವೀರಮಕ್ಕಳಿಂದ ಜನಪದ ಗೀತೆಯು ಪ್ರೇಕ್ಷಕರ ಗಮನ ಸೆಳೆದವು.
ಕಾರ್ಯಕ್ರಮಕ್ಕೂ ಮುನ್ನ ನಗರದ ಕಾಳಿಕಾಂಬ ದೇವಾಲಯದ ಆವರಣ ಹಾಗೂ ಗಜೇಂದ್ರ ಗರುಡ ಮೋಕ್ಷ ಕಲ್ಯಾಣಿಯಿಂದ ಕುಂಭಮೇಳದೊಂದಿಗೆ ವಿವಿಧ ಕಲಾ ತಂಡಗಳೊಂದಿಗೆ ಗಂಗಾಪರಮೇಶ್ವರಿ ವಿಗ್ರಹವನ್ನು ಬೆಳ್ಳಿ ಸಾರೋಟಿನ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net