3 ಕೋಟಿ ರೂ ವೆಚ್ಚದಲ್ಲಿ ಗಾಂಧಿಭವನ ನಿರ್ಮಾಣ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ ತಾಲೂಕು ಬಿ.ಹೊಸೂರು ಕಾಲನಿಯಲ್ಲಿ ನಿರ್ಮಾಣಗೊಂಡಿರುವ ಗಾಂಧಿಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಲೋಕಾರ್ಪಣೆಗೊಳಿಸಿದರು.
ಮಂಡ್ಯ ತಾಲೂಕು ಬಿ.ಹೊಸೂರು ಕಾಲನಿಯಲ್ಲಿ ನಿರ್ಮಾಣಗೊಂಡಿರುವ ಗಾಂಧಿಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಲೋಕಾರ್ಪಣೆಗೊಳಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮೂರು ಕೋಟಿ ರೂ ವೆಚ್ಚದ ಗಾಂಧಿ ಭವನ
  • ಬಿ.ಹೊಸೂರು ಕಾಲನಿಯಲ್ಲಿ ನಿರ್ಮಾಣ
  • ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಲೋಕಾರ್ಪಣೆ
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿಭವನದ ಮೂಲಕ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಬಿ.ಹೊಸೂರು ಕಾಲನಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಗಾಂಧಿಭವನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, 2016-17ನೇ ಸಾಲಿನ ಆಯವ್ಯಯ ಘೋಷಣೆಯನ್ವಯ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ 3 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಬಿ.ಹೊಸೂರು ಕಾಲನಿಯಲ್ಲಿ 36 ಗುಂಟೆ ಜಮೀನನ್ನು ಗಾಂಧಿ ಭವನ ನಿರ್ಮಾಣಕ್ಕಾಗಿ ಜಿಲ್ಲಾಡಳಿತದಿಂದ ಮಂಜೂರು ಮಾಡಿತ್ತು. ಈ ಭವನ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಮಹಾತ್ಮ ಗಾಂಧೀಜಿ ಅವರ ಮೂರ್ತಿ, ಗ್ಯಾಲರಿಯಲ್ಲಿ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಗ್ರಂಥಾಲಯ, ವಾಚನಾಲಯ, ವಿವಿಧೋದ್ದೇಶ ಸಭಾಂಗಣ, ತರಬೇತಿ ಕೇಂದ್ರ, ಗಾಂಧಿಯವರ ಜೀವನದ ವಿವಿಧ ಹಂತಗಳ ಫೋಟೊ ಗ್ಯಾಲರಿ, 100 ಜನ ಕುಳಿತುಕೊಳ್ಳಬಹುದಾದ ಸಭಾಂಗಣ, ಸುಂದರ ಆಕೃತಿಗಳ ಒಳಾಂಗಣ, ಕಚೇರಿಯನ್ನು ಹೊಂದಿದೆ ಎಂದು ಹೇಳಿದರು.
ಗಾಂಧೀಜಿಯ ಚಿಂತನೆ, ತತ್ವ, ಆದರ್ಶ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ತಿಳಿಸಲಾಗುವುದು. ಅವರ ಸರಳ ಜೀವನದ ಸಂದೇಶ, ಸತ್ಯಾಗ್ರಹ, ಗುಡಿ ಕೈಗಾರಿಕೆಗಳಿಗೆ ನೀಡಿದ ಪ್ರೋತ್ಸಾಹ, ಮಕ್ಕಳು, ಮಹಿಳೆಯರು, ಶೋಷಿತರು, ಹಿಂದುಳಿದ ವರ್ಗದವರ ಬಗೆಗೆ ಅವರಿಗಿದ್ದ ಕಾಳಜಿ-ತುಡಿತಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಗಾಂಧಿ ಭವನದಲ್ಲಿ ಕಾರ್ಯ ಚಟುವಟಿಕೆಗಳು ಹಾಗೂ ತರಬೇತಿಗಳನ್ನು ನಡೆಸಲಾಗುವುದು. ಕಾಲಕಾಲಕ್ಕೆ ಸಭೆ, ಸಮಾರಂಭಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಶಾಸಕ ಪಿ.ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net