ಕೆ.ಆರ್.ಪೇಟೆ ತಾಲೂಕಿನ ಸಾರಂಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ 2009ನೇ ಸಾಲಿನ ಹಳೇ ವಿದ್ಯಾರ್ಥಿಗಳು ಶಿಕ್ಷಕರನ್ನು ಹೂವಿನ ಸುರಿಮಳೆಯೊಂದಿಗೆ ವೇದಿಕೆಗೆ ಬರಮಾಡಿಕೊಂಡು ಗೌರವಿಸಿದರು.
ತಾಲೂಕಿನ ಸಾರಂಗಿ ಸರ್ಕಾರಿ ಪ್ರೌಢಶಾಲೆಯ 2009ನೇ ಸಾಲಿನ ಹಳೇ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
17 ವರ್ಷಗಳ ಬಳಿಕ ದೂರದ ಊರುಗಳಿಂದ ಆಗಮಿಸಿದ್ದ ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಗುರುಗಳಿಗೆ ಹೂವಿನ ಸುರಿಮಳೆಯೊಂದಿಗೆ ಆತ್ಮೀಯ ಸ್ವಾಗತ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಶಿಕ್ಷಕರಾದ ಶೇಕ್ ಅಹಮ್ಮದ್ ಮಾತನಾಡಿ, ಹಲವು ವರ್ಷಗಳ ಬಳಿಕವೂ ವಿದ್ಯಾರ್ಥಿಗಳು ಗುರುಗಳನ್ನು ನೆನಪಿಸಿಕೊಂಡು ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆದಿರುವುದೇ ಶಿಕ್ಷಕರಿಗೆ ದೊರೆಯುವ ದೊಡ್ಡ ಬಹುಮಾನ ಎಂದರು.
ಶಿಕ್ಷಕರಾದ ಎಸ್.ಸಿ.ರಾಮಚಂದ್ರು, ಲೀಲಾ, ಸತೀಶ್ ಸುರೇಶ್ ನಾಯಕ್, ಶಿಲ್ಪಾ, ಎ.ಜೆ.ಸೋಮಶೇಖರ್, ನಾಗರಾಜು ಹಾಗೂ ನಿಕಟಪೂರ್ವ ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದರಾಜು ಮಾತನಾಡಿದರು. ಶಾಲೆಯ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಕೈಜೋಡಿಸುವಂತೆ ಗೋವಿಂದರಾಜು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಹಳೇ ವಿದ್ಯಾರ್ಥಿಗಳು ಪರಸ್ಪರ ಹಳೆಯ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ಬಳಿಕ ಎಲ್ಲರೂ ಒಟ್ಟಾಗಿ ಕುಣಿದು-ಕುಪ್ಪಳಿಸಿ ಸ್ನೇಹ ಸಮ್ಮಿಲನಕ್ಕೆ ಮೆರುಗು ತಂದರು.