ಕೆ.ಆರ್.ಸಾಗರ ಸಮೀಪದ ಬೆಳಗೊಳ ಗ್ರಾಮದ ಬಲಮುರಿ ರಸ್ತೆಯಲ್ಲಿ ಗೌರಮ್ಮ ಎಂಬುವರ ಮನೆ ಗ್ಯಾಸ್ ಸೋರಿಕೆಯಿಂದಾಗಿ ಸಂಪೂರ್ಣ ಸುಟ್ಟು ಹೋಗಿದ್ದ ಸ್ಥಳಕ್ಕೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ವೈಯಕ್ತಿಕ ಧನಸಹಾಯ ನೀಡಿದರು. ಬಿ.ವಿ.ಲೋಕೇಶ್, ವಾಸು, ಸಂತೋಷ್, ಪ್ರಕಾಶ್, ದೇವರಾಜ ಇತರರು ಇದ್ದರು.
ಕೆ.ಆರ್.ಸಾಗರ: ಗ್ಯಾಸ್ ಸೋರಿಕೆಯಿಂದಾಗಿ ಸಂಪೂರ್ಣ ಸುಟ್ಟು ಹೋಗಿದ್ದ ಮನೆಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ಸಂತ್ರಸ್ತರಿಗೆ ದೈರ್ಯ ತುಂಬಿ, ವಯಕ್ತಿಕ ಧನ ಸಹಾಯ ಮಾಡಿದರು.
ಬೆಳಗೊಳ ಗ್ರಾಮದ ಬಲಮುರಿ ರಸ್ತೆಯಲ್ಲಿ ಗೌರಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಅವರ ಮಗ ರಾಜು ಹಾಗೂ ಅವರ ಸೊಸೆ ಆಶ್ವಿನಿ ವಾಸವಾಗಿದ್ದರು. ಗಂಡ-ಹೆಂಡತಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದು ಎಂದಿನಂತೆ ಗುರುವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಲ್ಲಿದ್ದ ಗ್ಯಾಸ್ ಸೋರಿಕೆಯಾಗಿ ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು.
ವಿಷಯ ತಿಳಿದ ರವೀಂದ್ರ ಶ್ರೀಕಂಠಯ್ಯ ಇತ್ತೀಚೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಹಾನಿಯಾಗಿರುವುದನ್ನ ಕಂಡು ಮರುಕ ವ್ಯಕ್ತಪಡಿಸಿದರು. ಅಲ್ಲದೆ ಘಟನೆಯಿಂದ ಪಕ್ಕದ ಕುಮಾರ್ ಎಂಬುವರ ಮನೆಯ ಗೋಡೆ ಹಾಗೂ ಛಾವಣಿ ಸಹ ಹಾನಿಯಾಗಿದ್ದನ್ನ ಗಮನಿಸಿ ಅವರಿಗೂ ಸಹ ವೈಯಕ್ತಿಕ ಧನ ಸಹಾಯ ಮಾಡಿ, ರಿಪೇರಿ ಮಾಡಿಸಿಕೊಳ್ಳುವಂತೆ ತಿಳಿಸಿದರು.
ನಂತರ ಅದೇ ಗ್ರಾಮದ ಚೌಡೇಗೌಡ ಎಂಬುವರ ಮನೆಯಲ್ಲಿ ಇತ್ತೀಚೆಗೆ ಅಡುಗೆ ಕುಕ್ಕರ್ ಸ್ಫೋಟದಿಂದಾಗಿ ಛಾವಣಿ ಕುಸಿದು, ಜಖಂಗೊಂಡಿದ್ದ ಮನೆಗೂ ಭೇಟಿ ನೀಡಿ ಧೈರ್ಯ ಹೇಳಿ ವೈಯಕ್ತಿಕ ಧನಸಹಾಯ ಮಾಡಿ ಮಾನವೀಯತೆ ಮೆರೆದರು.
ಈ ವೇಳೆ ಗ್ರಾಮದ ಮುಖಂಡರಾದ ಬಿ.ವಿ.ಲೋಕೇಶ್, ವಾಸು, ಸಂತೋಷ್ ಗ್ರಾಪಂ ಸದಸ್ಯ ಪ್ರಕಾಶ್, ದೇವರಾಜ, ಗುಣ, ಹೇಮಂತ್, ನಂದೀಶ್ ಸೇರಿದಂತೆ ಇತರರು ಇದ್ದರು.