ಮಂಡ್ಯ: ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಳವಳ್ಳಿ ತಹಸೀಲ್ದಾರ್‌ಗೆ ಛೀಮಾರಿ ಹಾಕಿರುವುದು ತಾಲೂಕಿನಲ್ಲಿ ನಡೆದಿರುವ ಭಾರಿ ಭೂ ಹಗರಣ ಪ್ರಕರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.
ಈ ಸಂಬಂಧ ಸಾಕಷ್ಟು ಬಾರಿ ಕ್ರಮ ವಹಿಸಲು ಮನವಿ ಮಾಡಿದ್ದೆ. ಆದರೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಿದ್ದಾಚಾರ್ ಎಂಬುವರ ಮೂಲಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ಇದೀಗ ತಾಲೂಕು ಆಡಳಿತ ಭೂಗಳ್ಳರ ಪರವಾಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಳವಳ್ಳಿ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ನಿರ್ಲಕ್ಷೃ ವಹಿಸಿದೆ. ಅಂತೆಯೇ ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿತವಾಗಿದ್ದು, ಇಲ್ಲಿನ ಭೂ ಹಗರಣಗಳಿಗೆ ಕುಮ್ಮಕ್ಕು ನೀಡುವಲ್ಲಿ ಮಾತ್ರ ಕೆಲಸ ಮಾಡುತ್ತಿದೆ. ಹಾಲಿ ಶಾಸಕರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತಾಲೂಕಿನಲ್ಲಿ 305 ಎಕರೆ ಅಕ್ರಮ ಆರ್‌ಟಿಸಿ ವಜಾ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ವಿರೋಧ ಪಕ್ಷವಾಗಿ ದೂರಿದ್ದೇನೆ. ಇದೀಗ ಲೋಕಾಯುಕ್ತರು ಛೀಮಾರಿ ಹಾಕಿದ್ದಾರೆ. ಕೂಡಲೇ ಅಕ್ರಮ ಭೂಗಳ್ಳರ ಪರವಾಗಿ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ತಾಪಂ ಆಡಳಿತ ನಿಷ್ಕ್ರಿಯಗೊಂಡಿದೆ. ಇಒ ಹಾಗೂ ಎಲ್ಲ ಆಡಳಿತಾಧಿಕಾರಿಗಳು ಸಾರ್ವಜನಿಕರ ಯಾವುದೇ ಕೆಲಸ ಮಾಡದೇ ಅಭಿವೃದ್ಧಿಯ ಕಡೆ ನಿರ್ಲಕ್ಷೃ ತೋರಿದ್ದಾರೆ. ಪುರಸಭೆಯ ಆವರಣದಲ್ಲಿ ನಿರ್ಮಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಲಾಗಿಲ್ಲ, ಕೇಂದ್ರ ಸಚಿವರು ನೀಡಿದ 10 ಲಕ್ಷ ರೂ.ಗಳಲ್ಲಿ ಒಂದು ಕಾಂಪೌಂಡ್ ನಿರ್ಮಾಣವಾಗಿರುವುದು ಬಿಟ್ಟರೆ ಬೇರಾವ ಕೆಲಸಗಳನ್ನು ಮಾಡಲಾಗಿಲ್ಲ ಎಂದರು.
ಮಳವಳ್ಳಿ ತಾಲೂಕು ಕಾವೇರಿ ಜಲಾನಯನ ಪ್ರದೇಶದ ಕೊನೆಯ ಭಾಗವಾಗಿದೆ. ಇಲ್ಲಿಗೆ ನೀರು ಒದಗಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಈ ಭಾಗದ ಕಾಲುವೆಗಳ ಅವುಗಳ ದುರಸ್ಥಿ ಕಾರ್ಯ ಯಾವಾಗ ಆಗುತ್ತವೆ ಎಂಬ ಮಾಹಿತಿಯೂ ರೈತರಿಗೆ ನೀಡದೇ ನೀರನ್ನೂ ಒದಗಿಸದೇ ವಂಚನೆ ಮಾಡಲಾಗುತ್ತಿದೆ. ಕನಕಭವನ ಮತ್ತು ಬಸವ ಭವನ ನಿರ್ಮಾಣ ಮಾಡುವಲ್ಲಿ ಶಾಸಕರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಕಾಮಗಾರಿ ಆರಂಭ ಮಾಡಲಿಲ್ಲ. ಸಾಮಾಜಿಕ ಸಂಘಟನೆಗಳು, ಸಂಸ್ಥೆಗಳು ಸಾರ್ವಜನಿಕರ ಪರ ಕೆಲಸ ಮಾಡುವ ಸಂಬಂಧ ಪ್ರಶ್ನೆ ಮಾಡಿದರೆ ಸುಮೋಟೊ ಪ್ರಕರಣ ದಾಖಲಿಸುವಂತೆ ಶಾಸಕರು ಹೇಳಿಕೆ ನೀಡಿದ್ದಾರೆ. ತಾಲೂಕಿನಲ್ಲಿ ಸಾರ್ವಜನಿಕರ ಕೆಲಸ ಮಾಡಲು ಅಧಿಕಾರಿಗಳನ್ನು ಪ್ರಶ್ನೆ ಮಾಡುವುದೇ ಅಪರಾಧವಾಗಿದೆ. ಶಾಸಕರು ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಜಿ.ಪಂ ಮಾಜಿ ಸದಸ್ಯ ಹನುಮಂತು, ಯುವ ಜೆಡಿಎಸ್ ತಾಲೂಕು ಅಧ್ಯಕ್ಷ ಚಂದಳ್ಳಿ ಶ್ರೀಧರ್, ಸಿದ್ದಾಚಾರ್, ಶಂಕರ್, ಚೇತನ್ ಇದ್ದರು.