ಎಸ್ಸಿ, ಎಸ್ಟಿ ಮತ್ತು ಓಬಿಸಿ ಮೀಸಲಾತಿಯನ್ನು ಶೇ.56ಕ್ಕೆ ಉರ್ಜಿತ ಮಾಡಲು ಆಗ್ರಹ
ಎಲ್ಲ ಪಕ್ಷಗಳ ನಾಯಕರು ಒತ್ತಡ ಹೇರಲಿ
ಮಂಡ್ಯ: ರಾಜ್ಯದ ಎಸ್ಸಿ, ಎಸ್ಟಿ ಮತ್ತು ಓಬಿಸಿ ಮೀಸಲಾತಿಯನ್ನು ಶೇ.56ಕ್ಕೆ ಉರ್ಜಿತ ಮಾಡಲು ಕೇಂದ್ರ ಸರ್ಕಾರ 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ರಾಜ್ಯದ ಎಲ್ಲ ಪಕ್ಷಗಳ ನಾಯಕರು ಒತ್ತಡ ಹೇರುವಂತೆ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಹಾಗೂ ಲೋಕಸಭೆ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ತಮಿಳುನಾಡಿನಲ್ಲಿ ಇದೇ ರೀತಿ ಕೇಂದ್ರದ ಮೇಲೆ ಒತ್ತಡ ಹಾಕಿ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕೂಡಲೇ ಸರ್ವ ಪಕ್ಷಗಳ ನಿಯೋಗವನ್ನು ಕರೆದೊಯ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಶೇ.56ರ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಹಾಗೂ ಸಂವಿಧಾನದ ಅನುಚ್ಛೇದ 15 ಮತ್ತು 16ಕ್ಕೆ ತಿದ್ದುಪಡಿ ತಂದು ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನದತ್ತವಾದ ಮೀಸಲಾತಿ ನೀಡಲು ಒತ್ತಾಯಿಸುವಂತೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮೀಸಲಾತಿಯಲ್ಲಿ ಎಸ್ಸಿಗೆ ಶೇ.17ರಷ್ಟು, ಎಸ್ಪಿಗೆ ಶೇ.7ರಷ್ಟು ಓಬಿಸಿಗೆ ಶೇ.32ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 2023ರ ಮಾ.22ರಂದು ಸರ್ವ ಪಕ್ಷಗಳ ಅನುಮೋದನೆ ಪಡೆದಿತ್ತು. ಇದನ್ನು ಜಾರಿ ಮಾಡಲು ಮುಂದಾದಾಗ ಹೈಕೋರ್ಟ್ ತಡೆ ನೀಡಿದೆ. ರಾಜ್ಯ ಸರ್ಕಾರ ಸರಿಯಾದ ವಾದ ಮಂಡಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀಸಲಾತಿ ಕಾಯ್ದೆಯನ್ನು 9ನೇ ಶೆಡ್ಯೂಲ್‌ಗೆ ಸೇರಿಸುವಂತೆ 2026ರ ಏ.16ರಂದು ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಎಲ್ಲ ಪಕ್ಷಗಳು ನಮ್ಮ ಬದುಕಿನ ಜತೆ ಚೆಲ್ಲಾಟವಾಡದೇ ಅವರ ಅನುಮೋದನೆ ತಂದು ಮೀಸಲಾತಿ ಜಾರಿ ಮಾಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಅವರು ಓಬಿಸಿಯ ಕೆಲವು ಜಾತಿಗಳನ್ನು ಎಸ್ಸಿಗೆ ಸೇರಿಸುವ ಪ್ರಸ್ತಾಪ ಮಾಡಿದ್ದಾರೆ. ಹಾಗೆ ಮಾಡುವುದಾದರೆ ಆ ಜಾತಿಗಳ ಕುಲಶಾಸ್ತ್ರ ಅಧ್ಯಯನ ಮಾಡಬೇಕು. ಈ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ವಾಲ್ಮಿಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಟಿ.ಆರ್.ತುಳಸೀರಾಂ, ದೇವರಾಜು, ಮಂಜುನಾಥ್ ಇತರರಿದ್ದರು.