ಮಂಡ್ಯ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ: ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಗಂಭೀರ ಆರೋಪ

ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ದಾಖಲೆ ಪ್ರದರ್ಶಿಸಿದರು.
ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ದಾಖಲೆ ಪ್ರದರ್ಶಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಶುಲ್ಕದಲ್ಲಿ ಅವ್ಯವಹಾರ
  • 50 ನೌಕರರ ಹೆಸರಲ್ಲಿ ವೇತನ ಪಾವತಿ
ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಈ ಸಂಬಂಧ ತನಿಖೆ ನಡೆಸುವಂತೆ ರಾಜ್ಯಪಾಲರು, ಸಿಎಂ, ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗುವುದು. ಜತೆಗೆ ಲೋಕಾಯುಕ್ತರಿಗೂ ದೂರು ನೀಡಲಾಗುವುದು ಎಂದು ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಹೇಳಿದರು.
ವಿವಿಯ ಪ್ರಭಾರ ಕುಲಪತಿ ಪ್ರೊ.ಶಿವಚಿತ್ತಪ್ಪ ಅವರ ನೇಮಕಾತಿ ಕಾನೂನುಬಾಹಿರ. ರಾಜಭವನದಲ್ಲಿರುವ ಕೆಲವು ಭ್ರಷ್ಟ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಿದ್ದಾರೆ. ಜ್ಯೇಷ್ಠತಾ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಶಿವಚಿತ್ತಪ್ಪ ಅವರನ್ನು ಪ್ರಭಾರ ಕುಲಪತಿಯಾಗಿ 2024ರ ನ.7ರಂದು ನೇಮಕ ಮಾಡಲಾಗಿದೆ. ಕರ್ನಾಟಕ ವಿವಿ ಕಾಯ್ದೆ 2000 ಪ್ರಕಾರ ವಿವಿಯ ಹಿರಿಯ ಡೀನ್ ಅವರನ್ನು ನೇಮಕ ಮಾಡಬೇಕಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಯುಜಿಸಿ ನಿಯಮಾನುಸಾರ ಯಾವುದೇ ವಿವಿ ಸ್ವಂತ ಕಾಯ್ದೆಗಳಿಲ್ಲದೇ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುವಂತಿಲ್ಲ. ಹೀಗಿರುವಾಗ ಮಂಡ್ಯ ವಿವಿ ಆರಂಭಗೊಂಡ ಅಂದಿನಿಂದಲೂ ಈವರೆಗೆ ಯಾವುದೇ ಕಾಯ್ದೆ ಮಾಡಿಕೊಂಡಿಲ್ಲ. ಕಾಯ್ದೆಗಳು ರಾಜ್ಯಪಾಲರು ಮತ್ತು ರಾಜ್ಯಸರ್ಕಾರದಿಂದ ಅನುಮೋದನೆಗೊಂಡಿರಬೇಕು. ಕಾಯ್ದೆ ರಚಿಸದೇ ಮೈಸೂರು ವಿವಿ ಕಾಯ್ದೆಗಳನ್ನೇ ಏಳು ವರ್ಷದಿಂದ ಅನುಸರಿಸಿಕೊಂಡು ಬರಲಾಗಿದೆ. ಇದರಿಂದಾಗಿ ಮಂಡ್ಯ ವಿವಿಯಿಂದ ಪ್ರದಾನ ಮಾಡಿರುವ ಪದವಿ, ವಿವಿ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಿಗೆ ಹೊಸ ಕೋರ್ಸ್‌ಗೆ ಅನುಮತಿ ನೀಡುವುದಾಗಿ, ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರನ್ನು ನೇಮಿಸುವುದಾಗಿ, ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸುವುದಾಗಿ ಕಾನೂನುಬಾಹಿರ. ಈ ಶೈಕ್ಷಣಿಕ ಚಟುವಟಿಕೆಗಳು ನಡೆದರೂ ಅದನ್ನು ಪ್ರಶ್ನಿಸಿದರೆ ಮಾನ್ಯತೆ ಇರುವುದಿಲ್ಲವೆಂದು ಹೇಳಿದರು.
ಸ್ವಂತ ಕಾಯ್ದೆಗಳು ಇಲ್ಲದಿದ್ದರೂ ವಿವಿ ದ್ವಾರ ಬಾಗಿಲು ನಿರ್ಮಾಣಕ್ಕೆ 3 ಕೋಟಿ ರೂ ವ್ಯಯಿಸಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಬಹುಮುಖ್ಯವಾಗಿ ಎಂಸಿಎ ಮತ್ತು ಎಂಬಿಎ ಕೋರ್ಸ್‌ಗಳನ್ನು ಆರಂಭಿಸದಿದ್ದರೂ ಒಂದು ವರ್ಷದ ಹಿಂದೆಯೇ 22 ಲಕ್ಷ ರೂ ಮೌಲ್ಯದ ಪುಸ್ತಕಗಳನ್ನು ಖರೀದಿ ಮಾಡಿದ್ದಾರೆ. ಇದಲ್ಲದೆ ಗ್ರಂಥಾಲಯಕ್ಕೆ 40 ಲಕ್ಷ ರೂ ಮೌಲ್ಯದ ಪುಸ್ತಕಗಳನ್ನು ಖರೀದಿಸಿದ್ದಾರೆ. ಅದರಲೂ ಪುಸ್ತಕದ ಮುಖಬೆಲೆಗಿಂತ ದುಪ್ಪಟ್ಟು ದರದ ಬಿಲ್ ಹಾಕಲಾಗಿದೆ. ಲಕ್ಷಾಂತರ ರೂ ಕೊಟ್ಟು ಕಂಪ್ಯೂಟರ್ ಪರಿಕರ ಖರೀದಿಸಿ ಕೊಠಡಿಯೊಂದರಲ್ಲಿ ದಾಸ್ತಾನು ಮಾಡಿಕೊಂಡಿದ್ದಾರೆ. ಆ್ಯಪಲ್ ಲ್ಯಾಬ್ ಬಳಕೆ ಮಾಡುತ್ತಿಲ್ಲ. ಅಗತ್ಯವಿಲ್ಲದಿದ್ದರೂ ಮೇಜು, ಕುರ್ಚಿ ಸೇರಿದಂತೆ ಇತರ ಪೀಠೋಪಕರಣಗಳನ್ನು ಖರೀದಿಸಿದ್ದಾರೆ. ಪಾರದರ್ಶಕ ನಿಯಮ ಪಾಲಿಸದೇ ವಿದ್ಯಾರ್ಥಿಗಳಿಂದ ಬಂದ ಶುಲ್ಕದ ಹಣದಿಂದ ಬೇಕಾಬಿಟ್ಟಿಯಾಗಿ ಖರೀದಿ ಮಾಡುತ್ತಿದ್ದಾರೆ ಎಂದು ದೂರಿದರು.

50 ನೌಕರರ ಹೆಸರಲ್ಲಿ ವೇತನ ಪಾವತಿ
ವಿವಿಗೆ ಸಂಬಂಧಿಸಿದಂತೆ ಟೆಂಡರ್ ರಹಿತರವಾಗಿ ಹೊರಗುತ್ತಿಗೆ ಆಧಾರದಲ್ಲಿ ಕಾವಲುಗಾರರು ಮತ್ತು ಇತರೆ ಸಿಬ್ಬಂದಿ ನೇಮಕಾತಿಯನ್ನು ಕಾನೂನುಬಾಹಿರವಾಗಿ ಮಾಡಿಕೊಳ್ಳಲಾಗಿದೆ. ಕೆಲಸ ಮಾಡುವವರ ಸಂಖ್ಯೆ 30 ನೌಕರರು. ಆದರೆ 50 ನೌಕರರ ಹೆಸರಿನಲ್ಲಿ ವೇತನ ಪಾವತಿಯಾಗುತ್ತಿದೆ ಎಂದು ಮರಿತಿಬ್ಬೇಗೌಡ ಆರೋಪಿಸಿದರು.
ಮಂಡ್ಯ ವಿವಿಯ ತೂಬಿನಕೆರೆ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ 12 ಸ್ನಾತಕೋತ್ತರ ವಿಭಾಗಗಳಲ್ಲಿ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಪ್ರಭಾರ ಕುಲಪತಿ ನೇಮಕವಾದ ನಂತರ ವಿವಿಯಲ್ಲಿ 9 ಸ್ನಾತಕೋತ್ತರ ವಿಭಾಗದಲ್ಲಿ 2025-26ನೇ ಸಾಲಿನಿಂದ ವಿದ್ಯಾರ್ಥಿಗಳಿಲ್ಲದೆ ಮುಚ್ಚಿವೆ. ಆದರೆ, ಉಳಿದಿರುವ 3 ಸ್ನಾತಕೋತ್ತರ ವಿಭಾಗಗಳು ಎಂ.ಎಸ್.ಡಬ್ಲುೃ, ಎಂ.ಕಾಂ ಮತ್ತು ಶುಗರ್ ತಂತ್ರಜ್ಞಾನ ಪ್ರಥಮ ಮತ್ತು ದ್ವಿತೀಯ ಸಾಲಿನಲ್ಲಿ ಕೇವಲ 99 ವಿದ್ಯಾರ್ಥಿಗಳು ಮಾತ್ರ ಅಧ್ಯಯನ ಮಾಡುತ್ತಿದ್ದಾರೆ ಎಂದರು.
ವಿವಿಯ ಮುಖ್ಯ ಘಟಕ (ಬಾಲಕರ ಸರ್ಕಾರಿ ಕಾಲೇಜು) 2025-26ನೇ ಸಾಲಿನಲ್ಲಿ ಎರಡು ಸಾಲಿನಿಂದ 461 ವಿದ್ಯಾರ್ಥಿಗಳು ಸ್ನಾತಕೋತ್ತರ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಭೌತಶಾಸ್ತ್ರ ವಿಭಾಗ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದೆ. ನಿರಂತರವಾಗಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net