ಎಲ್ಲ ಕ್ಷೇತ್ರದಲ್ಲೂ ಭಾರತ ಮುಂಚೂಣಿ: ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಲ ಕ್ಷೇತ್ರಗಳಲ್ಲೂ ಭಾರತ ಅದ್ವಿತೀಯ ಸಾಧನೆ
  • ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣಕಾಸಿನ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದಿಲ್ಲ
ಮಂಡ್ಯ: ಯುಪಿಎ ಸರ್ಕಾರ ರೂಪಿಸಿದ್ದ ಯೋಜನೆಗಳಿಗೆ ಮರು ಜೀವ ನೀಡುವ ಜತೆಗೆ ಅವುಗಳಿಗೆ ವೇಗ ನೀಡಲಾಗಿದೆ. 60 ವರ್ಷದ ಕಾಂಗ್ರೆಸ್ ಸರ್ಕಾರ ಮಾಡದ ಅಭಿವೃದ್ಧಿ ಕೆಲಸವನ್ನು ಕೇವಲ 11 ವರ್ಷದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸಾಧಿಸಿ ತೋರಿಸಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ರಸ್ತೆ, ರೈಲು, ಆಡಳಿತ ಸುಧಾರಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಸೇವಾ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಾರತ ಅದ್ವಿತೀಯ ಸಾಧನೆ ಮಾಡಿದೆ. ಇದು ನರೇಂದ್ರಮೋದಿ ಅವರು ಪ್ರಧಾನಿಯಾದ ಮೇಲೆ ಸಾಧ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಎಲ್ಲ ಹೆದ್ದಾರಿಗಳಲ್ಲೂ ಇದನ್ನೇ ಮಾನದಂಡವಾಗಿ ಇಟ್ಟುಕೊಳ್ಳಲಾಗಿದೆ. ಇನ್ನೂ ಸುಧಾರಣೆ ಆಗುವ ನಿಟ್ಟಿನಲ್ಲಿ ತಜ್ಞರು ಕಾರ್ಯೋನ್ಮುಖರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತದಲ್ಲಿ ಕೈಗಾರಿಕೆ ಸ್ಥಾಪನೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಈ ಪೈಕಿ ಅವರ ಅಯ್ಕೆ ಕರ್ನಾಟಕ ಆಗಿರುತ್ತದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರನ್ನೇ ಹೆಚ್ಚು ಅವಲಂಭಿಸಿರುತ್ತಾರೆ. ವೇಗವಾಗಿ ಉತ್ಪನೆ ಮತ್ತು ರಫ್ತು ಮಾಡಲು ಎಲ್ಲ ವ್ಯವಸ್ಥೆಗಳು ಇರುವುದರಿಂದ ಕರ್ನಾಟಕವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕರ್ನಾಟಕ ಕೈಗಾರಿಕೆಗಳ ಸ್ಥಾಪನೆಗೆ ಹೇಳಿ ಮಾಡಿಸಿದ ಜಾಗವಾಗಿದೆ. ಆದರೆ ರಾಜ್ಯ ಸರ್ಕಾರವೂ ಅವರಿಗೆ ಸೂಕ್ತವಾದ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣಕಾಸಿನ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದಿಲ್ಲ. ರಾಜ್ಯ ಸರ್ಕಾರ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ. ಹಣಕಾಸು ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದೆ. ಇದು ಯಾವ್ಯಾವ ರಾಜ್ಯಗಳಿಗೆ ಎಷ್ಟೆಷ್ಟು ಅನುದಾನ ಹಂಚಿಕೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ. ಇಷ್ಟೇ ಅಲ್ಲದೆ ಸ್ವತಃ ಕೇಂದ್ರ ಸರ್ಕಾರಕ್ಕೂ ಸಹ ಹಣಕಾಸು ಆಯೋಗ ನಿಗಧಿಪಡಿಸಿದ ಅನುದಾನವನ್ನೇ ಬಳಸಿಕೊಳ್ಳಬೇಕು. ಕಳೆದ ವರ್ಷ ರಾಜ್ಯಕ್ಕೆ 3.6ರಷ್ಟು ಅನುದಾನ ನೀಡಿದೆ. ಈ ಬಾರಿ 4.16ರಷ್ಟು ಅನುದಾನ ನೀಡುವುದರೊಂದಿಗೆ ಒಂದೂವರೆ ಪಟ್ಟು ಹೆಚ್ಚಳ ಮಾಡಿದೆ. ಇದು ಯಾವ ರೀತಿ ಅನ್ಯಾಯ ಎಂದು ಪ್ರಶ್ನಿಸಿದರು.
ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಆಲೋಚನೆಯಿಂದ ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದಲ್ಲಿ 9 ವಿವಿಗಳನ್ನು ಸ್ಥಾಪಿಸಲಾಯಿತು. ಇರುವಂತಹ ಹುದ್ದೆಗಳಲ್ಲೇ ಅವುಗಳ ನಿರ್ವಹಣೆ ಸಾಧ್ಯವಿತ್ತು. ಆದರೆ ಅಗತ್ಯವಿದ್ದ ಹುದ್ದೆಗಳನ್ನು ರಾಜ್ಯ ಸರ್ಕಾರ ನೀಡಲಿಲ್ಲ. ಮೈಸೂರು ವಿವಿಯಲ್ಲಿ ಒತ್ತಡ ಹೆಚ್ಚಿದ ಕಾರಣಕ್ಕೆ ಪ್ರತ್ಯೇಕ ವಿವಿಗಳನ್ನು ಸ್ಥಾಪಿಸುವ ಚಿಂತನೆ ಮಾಡಲಾಗಿತ್ತು. ಇದರಿಂದ ಕಾರ‌್ಯಕ್ಷಮತೆ ಹೆಚ್ಚುವುದರ ಜೊತೆಗೆ ಒಳಗೊಳ್ಳುವಿಕೆಯೂ ಹೆಚ್ಚಾಗಿತ್ತು. ಆದರೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅನುದಾನ ನೀಡದೆ ಅವುಗಳ ಕತ್ತು ಹಿಸುಕಲಾಯಿತು ಎಂದು ಆರೋಪಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನವಾಗುತ್ತದೆ. ಅದನ್ನು ರಾಜ್ಯ ಮತ್ತು ಜಿಲ್ಲೆಗಳಲ್ಲೂ ಪಾಲನೆ ಮಾಡಬೇಕು. ಬಿಜೆಪಿ ಮತ್ತು ಜೆಡಿಎಸ್‌ಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯುವುದೇ ಆಗಿದೆ. ಮತ್ತು ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಯುವ ನಾಯಕ ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಶ್ರೀಧರ್, ವಸಂತ್, ಎಚ್.ಆರ್.ಅಶೋಕ್‌ಕುಮಾರ್ ಇದ್ದರು.

ಸ್ವಾವಲಂಬಿ, ಆತ್ಮನಿರ್ಭರ ಭಾರತದ ಗುರಿ
ಆಡಳಿತದಲ್ಲಿ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿ ಸ್ವಾವಲಂಬಿ ಮತ್ತು ಆತ್ಮನಿರ್ಭರ ಭಾರತ ಗುರಿಯಾಗಿರಿಸಿಕೊಂಡು, ಉದ್ಯೋಗ, ಕೃಷಿ ಉತ್ಪಾದನೆ, ನಾಗರೀಕರ ಕೊಳ್ಳುವ ಶಕ್ತಿ ಹೆಚ್ಚಿಸಲು ಕೇಂದ್ರ ಬಜೆಟ್ ರೂಪಿಸಲಾಗಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬಜೆಟ್‌ನಲ್ಲಿ ಮೂರು ಕರ್ತವ್ಯ ಭಾಗವಾಗಿ ವಿಂಗಡಣೆ ಮಾಡಲಾಗಿದೆ. ಆರ್ಥಿಕ ಕ್ಷೇತ್ರಕ್ಕೆ ವೇಗ ಹೆಚ್ಚಿಸುವುದು, ನಾಗರಿಕರ ಆಶಯಗಳನ್ನು ಈಡೇರಿಸುವುದು, ಮತ್ತು ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಸುಧಾರಣೆಗೆ ಪ್ರಾಧಾನ್ಯತೆ ನೀಡಲಾಗಿದೆ. 350ಕ್ಕೂ ಹೆಚ್ಚಿನ ಸುಧಾರಣೆಗಳನ್ನು ತರಲಾಗಿದೆ. ಸ್ಥಿರ ಅಭಿವೃದ್ಧಿ, ಅಸ್ತಿರ ಜಾಗತಿಕ ಪರಿಸ್ಥಿತಿಯಲ್ಲೂ ನರೇಂದ್ರಮೋದಿ ಅವರ ಸರ್ಕಾರ ಶೇ. 7ರಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ಬಾರಿ ಇದ್ದ ಶೇ.4.5 ಜಿಡಿಪಿಯನ್ನು ಪ್ರಸಕ್ತ ಸಾಲಿನಲ್ಲಿ ಶೇ.4.3ಕ್ಕೆ ಇಳಿಸಲಾಗಿದೆ. ಜಿಡಿಪಿ ಅನುಪಾತವನ್ನು ಈ ಬಾರಿ ಶೇ.55.6ಕ್ಕೆ ಇಳಿಸಲಾಗಿದ್ದು, ಮುಂದಿನ 2031ರ ವೇಳೆಗೆ ಶೇ.50ಕ್ಕೆ ತರುವ ಗುರಿ ಹೊಂದಲಾಗಿದೆ. ರಾಜ್ಯಗಳಿಗೆ 16ನ ಹಣಕಾಸು ಆಯೋಗದ ಶಿಫಾರಸಿನಂತೆ ಶೇ. 41 ತೆರಿಗೆ ಪಾಲು ಮತ್ತು 1.4 ಲಕ್ಷ ಕೋಟಿ ರೂ ಅನುದಾನವನ್ನು ನೀಡಲಾಗಿದೆ ಎಂದು ವಿವರಿಸಿದರು.
ಮಧ್ಯಮ ವರ್ಗದವರಿಗೆ ವಾರ್ಷಿಕ 12 ಲಕ್ಷ ರೂವರೆಗೆ ಶೂನ್ಯ ಆದಾಯ ತೆರಿಗೆ ಸೌಲಭ್ಯವನ್ನು ಮುಂದುವರಿಸಲಾಗಿದೆ. ಕ್ಯಾನ್ಸರ್ ಸೇರಿದಂತೆ 17 ಔಷಧಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಲಾಗಿದೆ. 7 ಅಪರೂಪದ ಕಾಯಿಲೆಗಳ ಔಷಧಗಳ ಮೇಲಿನ ಆಮದು ಸುಂಕ ವಿನಾಯಿತಿಯನ್ನು ವಿಸ್ತರಿಸಲಾಗಿದೆ. ಸೇವಾ ವಲಯದಲ್ಲಿ ಭಾರತದ ಪಾಲನ್ನು 2047ರ ಹೊತ್ತಿಗೆ ಶೇ.10ರಷ್ಟು ಏರಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳ ಬಳಿ 5 ಹೊಸ ವಿವಿ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸುವುದು. ಮುಂದಿನ 5 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ 1 ಲಕ್ಷ ಸಹಾಯಕ ಆರೋಗ್ಯ ವೃತ್ತಿಪರರನ್ನು ಸಿದ್ಧಪಡಿಸಲು ಹೊಸ ಸಂಸ್ಥೆಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
ಗುಣಮಟ್ಟದ ಶಿಕ್ಷಣದ ಮೂಲಕ ಯುವಶಕ್ತಿ ಸಬಲೀಕರಣ, ಎಂಎಸ್‌ಎಂಇ ಸಾಮರ್ಥ್ಯ ಹೆಚ್ಚಿಸುವುದು, ಬೃಹತ್ ಪ್ರಮಾಣದ ಉತ್ಪಾದನೆ ವಿಸ್ತರಣೆ ಮಾಡಲು ಯೋಜನೆ, ಮೂಲಸೌಕರ್ಯ ಆಧಾರಿತ ಬೆಳವಣಿಗೆಯಲ್ಲಿ ಸಾರ್ವಜನಿಕ ಬಂಡವಾಳವನ್ನು 11.2 ಲಕ್ಷ ಕೋಟಿ ರೂನಿಂದ 12.2 ಲಕ್ಷ ಕೋಟಿ ರೂಗೆ ಏರಿಸುವುದು, 5 ವರ್ಷದಲ್ಲಿ 20 ಹೊಸ ರಾಷ್ಟ್ರೀಯ ಜಲ ಮಾರ್ಗಗಳ ಕಾರ್ಯಗತಗೊಳಿಸುವುದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸೀಪ್ಲೇನ್ ಉತ್ಪಾದನೆ ಮತ್ತು ಕಾರ್ಯಾಚರಣೆಗೆ ವಿಶೇಷ ರಿಯಾಯಿತಿ. ದೊಡ್ಡ ನಗರಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಸರ್ಕಾರಕ್ಕೆ ಕೇಂದ್ರ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net