‘ಅಕ್ಕನ ಬುತ್ತಿ’ಯಿಂದ ಪೌಷ್ಟಿಕಾಂಶ ತಿನಿಸು: ಬೇವಿನಹಳ್ಳಿ ಸಂಜೀವಿನಿ ಒಕ್ಕೂಟದ ವಿನೂತನ ಪ್ರಯತ್ನ

ಅಕ್ಕನ ಬುತ್ತಿ ಪ್ರಚಾರಕ್ಕೆ ಮಂಡ್ಯದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಚಾಲನೆ ನೀಡಿದರು.
ಅಕ್ಕನ ಬುತ್ತಿ ಪ್ರಚಾರಕ್ಕೆ ಮಂಡ್ಯದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಕ್ಕನ ಬುತ್ತಿ ಆಹಾರ ತಯಾರಿಕಾ ಕೇಂದ್ರ
  • ಬೇವಿನಹಳ್ಳಿ ಸಂಜೀವಿನಿ ಒಕ್ಕೂಟದ ವಿನೂತನ ಪ್ರಯತ್ನ
  • ಪ್ರಚಾರಕ್ಕೆ ಜಿಪಂ ಸಿಇಒ ನಂದಿನಿ ಚಾಲನೆ
ಮಂಡ್ಯ: ಸರ್ಕಾರಿ ಮತ್ತು ಖಾಸಗಿ ಕಚೇರಿ, ಬ್ಯಾಂಕ್ ಸೇರಿದಂತೆ ಇನ್ನಿತರೆ ಸಂಸ್ಥೆಗಳಿಗೆ ಸ್ವ-ಸಹಾಯ ಸಂಘದಿಂದ ತಯಾರಿಸಿದ ಶುಚಿ, ರುಚಿಯಾದ, ರಾಸಾಯನಿಕ ಮುಕ್ತ ಪೌಷ್ಠಿಕಾಂಶಯುಕ್ತ ಆಹಾರದ ಡಬ್ಬಿಗಳನ್ನು ತಲುಪಿಸಲು ಅಕ್ಕನ ಬುತ್ತಿ ಆಹಾರ ತಯಾರಿಕಾ ಕೇಂದ್ರ(ಕ್ಲೌಡ್ ಕಿಚನ್) ಪ್ರಾರಂಭಿಸಲಾಗುತ್ತಿದೆ. ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸ್ವ-ಸಹಾಯ ಸಂಘದ ಮೂಲಕ ಕಚೇರಿಗೆ ಆಹಾರದ ಡಬ್ಬಿಗಳನ್ನು ತಲುಪಿಸುವ ಕಾರ್ಯಕ್ರಮ ರೂಪಿಸಲಾಗಿದೆ. ವಿಶೇಷವೆಂದರೆ ವಾರದ ಆರು ದಿನವೂ ಮಧ್ಯಾಹ್ನದ ಊಟ ಲಭ್ಯವಿರಲಿದೆ. ಮಾತ್ರವಲ್ಲದೆ ಪ್ರತಿದಿನ ವಿಭಿನ್ನ ರೀತಿಯ ಆಹಾರ ನೀಡಲಾಗುತ್ತದೆ. ಮೊಬೈಲ್ ನಂಬರ್ ಒತ್ತಿ, ಬರಲಿದೆ ನಿಮ್ಮ ಕಚೇರಿಗೆ ಬುತ್ತಿ ಎಂಬ ಘೋಷವಾಕ್ಯದೊಂದಿಗೆ ಅಕ್ಕನ ಬುತ್ತಿ ಆಹಾರ ತಯಾರಿಕಾ ಕೇಂದ್ರ ಸ್ಥಾಪಿಸಲಾಗಿದೆ. ಈ ಮೂಲಕ ಉತ್ತಮ ಗುಣಮಟ್ಟದ ಆಹಾರವನ್ನು ಕಚೇರಿಗಳಿಗೆ ಒದಗಿಸುವ ಉದ್ದೇಶ ಹೊಂದಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಪಂ ಕಚೇರಿ ಸಭಾಂಗಣದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಇತರೆ ಕಚೇರಿಯಲ್ಲಿ ನಡೆಯುವ ಸಭೆಗಳಿಗೂ ಸ್ವ-ಸಹಾಯ ಸಂಘಗಳಿಂದ ಮಧ್ಯಾಹ್ನದ ಉಪಾಹಾರ, ಕಾಫಿ, ಟೀ ಸರಬರಾಜು ಪಡೆಯುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಎಲ್ಲ ತಾ.ಪಂ ಇಒಗಳು ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕಿ ಕೆ.ಎನ್.ರೂಪಶ್ರೀ, ಉಪ ಕಾರ್ಯದರ್ಶಿ(ಅಭಿವೃದ್ಧಿ) ಪಿ.ಲಕ್ಷ್ಮೀ, ಉಪ ಕಾರ್ಯದರ್ಶಿ(ಆಡಳಿತ) ಶಿವಲಿಂಗಯ್ಯ, ಮುಖ್ಯ ಯೋಜನಾಧಿಕಾರಿ ಧನುಷ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net