ನಿಸ್ವಾರ್ಥ ಸೇವೆ ಇತರರಿಗೆ ಸ್ಪೂರ್ತಿ: ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಅಭಿಮತ

ಮಂಡ್ಯ ನಗರದ ಮಿಮ್ಸ್ ಆವರಣದಲ್ಲಿ ಮಮತೆಯ ಮಡಿಲು ಅಂಗಳದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ.ಕೃಷ್ಣ ಸಾರ್ವಜನಿಕರಿಗೆ ಊಟ ವಿತರಿಸಿದರು.
ಮಂಡ್ಯ ನಗರದ ಮಿಮ್ಸ್ ಆವರಣದಲ್ಲಿ ಮಮತೆಯ ಮಡಿಲು ಅಂಗಳದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ.ಕೃಷ್ಣ ಸಾರ್ವಜನಿಕರಿಗೆ ಊಟ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಮತೆಯ ಮಡಿಲು ನಿತ್ಯ ಅನ್ನದಾಸೋಹ
  • ಏಳು ವರ್ಷದಿಂದ ನಿರಂತರ ಸೇವೆ
  • ಗಣ್ಯರಿಂದ ಶ್ಲಾಘನೆ
ಮಂಡ್ಯ: ನಿಸ್ವಾರ್ಥತೆಯಿಂದ ಸಲ್ಲಿಸುವ ಸೇವೆಯು ಇತರರಿಗೆ ಸ್ಪೂರ್ತಿದಾಯಕವಾಗಿರುತ್ತದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ.ಕೃಷ್ಣ ಹೇಳಿದರು.
ನಗರದ ಮಿಮ್ಸ್ ಆವರಣದಲ್ಲಿ ಆಯೋಜಿಸಿದ್ದ ಮಮತೆಯ ಮಡಿಲು ನಿತ್ಯ ಅನ್ನದಾಸೋಹದ 7ನೇ ವರ್ಷದ ಕಾಯಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಯಂ ಸೇವಾ ನೆಲೆಗಟ್ಟಿನಲ್ಲಿ ಜನರಿಂದ ಜನರಿಗೆ ನೆರವಾಗುವ ಕಾಯಕ ಸ್ತುತ್ಯಾರ್ಹ. ಗಾಂಧೀಜಿಯವರ ಆಶಯಗಳಿಗೆ ಪೂರಕವಾಗಿ ಜನರ ಶ್ರಮ ಜೀವನವನ್ನು ಅರ್ಥೈಸಿಕೊಂಡು ಮಿಮ್ಸ್‌ನ ಅಂಗಳಕ್ಕೆ ಬರುವ ಜನರಿಗೆ ದಾಸೋಹ ನೆರವೇರಿಸುತ್ತಿರುವುದು ಅಭಿನಂದನಾರ್ಹ. 6 ವರ್ಷ ಸತತವಾಗಿ ದಾಸೋಹ ಸೇವೆ ಸಲ್ಲಿಸಿರುವುದು ಇತರರಿಗೆ ಮಾದರಿ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಯಬೇಕಾದರೆ ಜನತೆಗೆ ನಿಕಟವಾಗಿರುವ ಸೇವೆಯನ್ನು ಹಮ್ಮಿಕೊಳ್ಳಬೇಕು. ಮನುಕುಲ ಸಂರಕ್ಷಣೆಯ ಮಹತ್ವವನ್ನು ಅರ್ಥೈಸಿಕೊಂಡು ಸಾಮಾಜಿಕ ಕಳಕಳಿಯೊಡನೆ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಮಂಗಲ ಎಂ.ಯೋಗೀಶ್ ದಂಪತಿ ಸೇವೆ ಶ್ಲಾಘನೀಯ. ಮಿಮ್ಸ್‌ನ ಅಂಗಳಕ್ಕೆ ಬರುವ ಅಸಂಘಟಿತ ಜನರಿಗೆ ಸಾಂತ್ವನ ಹೇಳುವ ರೀತಿಯಲ್ಲಿ ದಾಸೋಹ ಸಿಗುತ್ತಿರುವುದು ನಿಜಕ್ಕೂ ಮಮತೆಯನ್ನು ತೋರುತ್ತಿರುವ ಮಡಿಲಾಗಿದೆ. ಸೇವೆ ಮತ್ತು ನಿಸ್ವಾರ್ಥ ಮನೋಭಾವ ಸಮಾಜದ ಇತರರಿಗೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಕಾಯಕಕ್ಕೆ ನೆರವಾಗುತ್ತಿರುವ ಎಲ್ಲ ಜನರಿಗೂ ಅಭಿನಂದನೆ ಸಲ್ಲಿಸಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ಮಮತೆಯ ಮಡಿಲು ಅತ್ಯಂತ ಪಾರದರ್ಶಕವಾಗಿ ಬದ್ಧತೆಯಿಂದ ದಾಸೋಹ ಕಾಯಕ ನಿರ್ವಹಿಸುತ್ತಿರುವುದರಿಂದ ಜನರ ನೆರವು ಮತ್ತು ಪ್ರೀತಿ ಹೆಚ್ಚಳವಾಗಿದೆ ಎಂದರು.
ಮಮತೆಯ ಮಡಿಲು ಮುಖ್ಯಸ್ಥ ಮಂಗಲ ಎಂ.ಯೋಗೀಶ್ ಮಾತನಾಡಿದರು. ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್, ಪರಿಸರ ಸಂಸ್ಥೆ ಕಾರ್ಯದರ್ಶಿ ಅರುಣಕುಮಾರಿ, ಸಂಚಾಲಕರಾದ ಬಸವರಾಜ್ ಸಂತೆಕಸಲಗೆರೆ, ಶ್ರೀನಾಥ್, ವಿದ್ಯಾಶ್ರೀ, ನಂದಿನಿ, ಚಿತ್ರಕೂಟ ಸಂಸ್ಥೆಯ ಅರವಿಂದ್ ಪ್ರಭು ಇತರರಿದ್ದರು. ಸಂಕ್ರಾತಿ ಹಬ್ಬದ ನಿಮಿತ್ತ ಪ್ಲಾಸ್ಟಿಕ್‌ಮುಕ್ತ ಸಮಾಜವನ್ನಾಗಿಸಲು ಮಣ್ಣಿನ ಚಿತ್ತಾರದ ಮೆರಗಿನಿಂದ ಕೂಡಿರುವ ಮಣ್ಣಿನ ಕುಡಿಕೆಯಲ್ಲಿ ಎಳ್ಳುಬೆಲ್ಲ ಸಿಹಿ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net