ಹವಾಮಾನ ವೈಪರೀತ್ಯದಿಂದ ದೇಶದಲ್ಲಿ ಅನ್ನ, ನೀರಿಗೆ ಹಾಹಾಕಾರ

 ಚಾಮನಹಳ್ಳಿಯ ಶ್ರೀ ಬಂಡೆ ಶನೈಶ್ಚರಸ್ವಾಮಿಯ ಕ್ಷೇತ್ರಕ್ಕೆ ಶ್ರೀ ಕೋಡಿ ಮಠದ ಮಹಾ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನ ಅರ್ಚಕ ಕೃಷ್ಣಪ್ಪ ಇದ್ದರು.
ಚಾಮನಹಳ್ಳಿಯ ಶ್ರೀ ಬಂಡೆ ಶನೈಶ್ಚರಸ್ವಾಮಿಯ ಕ್ಷೇತ್ರಕ್ಕೆ ಶ್ರೀ ಕೋಡಿ ಮಠದ ಮಹಾ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನ ಅರ್ಚಕ ಕೃಷ್ಣಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ
ಮದ್ದೂರು: ಹವಾಮಾನ ವೈಪರೀತ್ಯದಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿನ ಹಾಹಾಕಾರ ಎದುರಾಗಲಿದೆ ಎಂದು ಶ್ರೀ ಕೋಡಿ ಮಠದ ಮಹಾ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಬಂಡೆ ಶನೈಶ್ಚರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಮಹಾ ರಾಜಗೋಪುರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನದಿಂದ ದಿನಕ್ಕೆ ಹವಾಮಾನ ವೈಪರೀತ್ಯದಿಂದ ಪ್ರಕೃತಿಯಲ್ಲಿ ಏರುಪೇರಾಗುತ್ತಿದ್ದು, ಅಪಮೃತ್ಯುಗಳು ಹೆಚ್ಚಾಗಲಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿನ ಹಾಹಾಕಾರದ ಸಮಸ್ಯೆ ಎದುರಾಗಲಿದೆ. ಆದರೆ, ಕರ್ನಾಟಕಕ್ಕೆ ಯಾವುದೇ ರೀತಿಯ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂದರು.
ಶನೈಶ್ಚರ ಸ್ವಾಮಿಯೂ ಪ್ರತಿಯೊಬ್ಬ ಮನುಷ್ಯನಿಗೂ ಗುರು ಸ್ಥಾನದಲ್ಲಿದ್ದು, ಸರಿ, ತಪ್ಪುಗಳನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಸಲಿದ್ದಾರೆ. ಈ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಹೊಂದಲು ದೇವರ ಅನುಗ್ರಹ ಮುಖ್ಯ. ಇತ್ತೀಚೆಗೆ ಸಾಕಷ್ಟು ದೈವಾರಾಧನೆಗಳು ನಡೆಯುತ್ತಿರುವ ಪರಿಣಾಮ ಮಳೆ, ಬೆಳೆಯಾಗಿ ರಾಜ್ಯದ ಜನರು ದೈವಾರಾಧನೆಯ ಮೂಲಕ ಸಮೃದ್ಧಿ ಜೀವನ ನಡೆಸಲಿದ್ದಾರೆ ಎಂದರು.
ವಿವಿಧ ಧಾರ್ಮಿಕ ಕಾರ್ಯಕ್ರಮ: ಬಂಡೆ ಶನೈಶ್ಚರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಮಹಾ ರಾಜಗೋಪುರ ಉದ್ಘಾಟನೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಬಳಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಶನಿವಾರ ಬೆಳಗ್ಗೆ ಅಭಿಷೇಕ, ಸುಪ್ರಭಾತ, ವೇದಪಾರಾಯಣ, ಕಲಶಾರಾಧನೆ, ಫಲ ಪಂಚಾಮೃತ ಹೋಮ, ಏಕವಾರ ರುದ್ರಾಭಿಷೇಕ ಮಧ್ಯಾಹ್ನ 12 ಗಂಟೆಗೆ ಮಹಾಕುಂಭಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯ ನೆರವೇರಿತು. ರಾತ್ರಿ ಶ್ರೀ ಛಾಯಾದೇವಿ ಅಮ್ಮ ಅವರ ಪುಜಾ ಕುಣಿತ, ಅಮ್ಮನವರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮ ನಡೆಯಿತು ಹಾಗೂ ರಾತ್ರಿ 10 ಗಂಟೆಯಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.
ಭಾನುವಾರ ಬೆಳಗ್ಗೆ 4 ಗಂಟೆಗೆ ಶನೈಶ್ಚರಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಸೋಮವಾರ ಮರುಹಬ್ಬದ ಪ್ರಯುಕ್ತ ಆಶ್ರಯ ಬಡಾವಣೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಶ್ರೀ ಛಾಯಾದೇವಿ ಅಮ್ಮನವರ ಪೂಜಾ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ರಸಮಂಜರಿ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಅರ್ಚಕ ಕೃಷ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net