ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ

ಕೆ.ಎಂ.ದೊಡ್ಡಿಯ ಚಾಂಶುಗರ್ಸ್‌ ಕಾರ್ಖಾನೆ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಕಬ್ಬು ಸಾಗಿಸುವ ಎತ್ತಿನಗಾಡಿ ಮತ್ತು ಟ್ರಾೃಕ್ಟರ್‌ಗಳಿಗೆ ರೇಡಿಯಮ್ ರಿಫ್ಲೆಕ್ಟರ್ ಅಳವಡಿಸುವ ಕಾರ್ಯಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ಚಾಲನೆ ನೀಡಿದರು.
ಕೆ.ಎಂ.ದೊಡ್ಡಿಯ ಚಾಂಶುಗರ್ಸ್‌ ಕಾರ್ಖಾನೆ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಕಬ್ಬು ಸಾಗಿಸುವ ಎತ್ತಿನಗಾಡಿ ಮತ್ತು ಟ್ರಾೃಕ್ಟರ್‌ಗಳಿಗೆ ರೇಡಿಯಮ್ ರಿಫ್ಲೆಕ್ಟರ್ ಅಳವಡಿಸುವ ಕಾರ್ಯಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಚಾಲಕರಿಗೆ ಠಾಣೆ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಸೂಚನೆ
  • ಕಬ್ಬು ಸಾಗಿಸುವ ಎತ್ತಿನಗಾಡಿ, ವಾಹನಗಳಿಗೆ ರೇಡಿಯಂ ರಿಫ್ಲೆಕ್ಟರ್ ಅಳವಡಿಕೆ

ಕೆ.ಎಂ.ದೊಡ್ಡಿ:

ರೈತರು ಕಬ್ಬು ಸಾಗಿಸುವ ಸಂದರ್ಭದಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ, ಪೊಲೀಸ್ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಇಲ್ಲಿನ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ತಿಳಿಸಿದರು.

ಇಲ್ಲಿನ ಚಾಂಶುಗರ್ಸ್‌ ಕಾರ್ಖಾನೆ ಮತ್ತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಸಹಯೋಗದೊಂದಿಗೆ ಚಾಂಶುಗರ್ಸ್‌ ಕಾರ್ಖಾನೆಗೆ ಎತ್ತಿನಗಾಡಿ ಮತ್ತು ಟ್ರಾೃಕ್ಟರ್‌ಗಳಿಗೆ ರೇಡಿಯಮ್ ರಿಫ್ಲೆಕ್ಟರ್‌ಗಳನ್ನು ಅಳವಡಿಸಿದ ನಂತರ ಮಾತನಾಡಿದ ಅವರು, ಎತ್ತಿನಗಾಡಿ ಮತ್ತು ಟ್ರಾೃಕ್ಟರ್‌ಗಳಿಗೆ ಎಲ್ಲೆಡೆ ಕಾಣುವ ರೀತಿಯಲ್ಲಿ ರೇಡಿಯಮ್ ರಿಫ್ಲ್ಲೆಕ್ಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದರು.
ಕಬ್ಬು ಸಾಗಿಸುವ ವಾಹನಗಳಾದ ಲಾರಿ, ಟ್ರಾೃಕ್ಟರ್ ಚಾಲಕರಿಗೆ ಹಾಗೂ ಎತ್ತಿನಗಾಡಿಗಳಲ್ಲಿ ಸರಬರಾಜು ಮಾಡುವ ರೈತರಿಗೆ ಕೆಲವು ನಿಬಂಧನೆಗಳ ಸಹಿತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕಾರ್ಖಾನೆಯ ಆಡಳಿತ ಮಂಡಳಿಯವರು ಸಹಿತ ಎಲ್ಲರೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಕಾರ್ಖಾಗೆ ಕಬ್ಬು ಸಾಗಿಸುವ ವಾಹನಗಳಿಗೆ ತೂಕದ ಮಿತಿ ನಿಗದಿ ಮಾಡಿದ್ದು, ಎತ್ತಿನಗಾಡಿಯಲ್ಲಿ 3 ರಿಂದ 3.5 ಟನ್ ಕಬ್ಬು ಸೇರಿದಂತೆ ಒಟ್ಟು ತೂಕ 6 ಟನ್‌ಗಿಂತ ಹೆಚ್ಚಿರಬಾರದು. ಟ್ರ್ಯಾಕ್ಟರ್‌ಗಳಲ್ಲಿ ಕಬ್ಬಿನ ತೂಕವನ್ನು 6 ರಿಂದ 8 ಟನ್‌ವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮಿತಿಗಿಂತ ಹೆಚ್ಚಿದ್ದರೆ ಕಾರ್ಖಾನೆಯ ಆಡಳಿತ ಮಂಡಳಿ ಸ್ವೀಕರಿಸುವುದಿಲ್ಲ. ಪೊಲೀಸ್ ಇಲಾಖೆ ವತಿಯಿಂದ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿರಬೇಕು. ಒಂದೇ ಟ್ರ್ಯಾಕ್ಟರ್ ಎಂಜಿನ್‌ಗೆ ಎರಡು ಟ್ರೈಲರ್ ಅಳವಡಿಸಿ, ಅತಿ ಎತ್ತರಕ್ಕೆ ಕಬ್ಬು ತುಂಬಿ ಸಾಗಿಸುವುದನ್ನು ನಿಲ್ಲಿಸಬೇಕು. ಟ್ರಾೃಕ್ಟರ್ ಮತ್ತು ಲಾರಿಗಳ ಚಕ್ರಗಳು (ಟೈರ್‌ಗಳು) ಸುಸ್ಥಿತಿಯಲ್ಲಿರಬೇಕು. ಜತೆಗೆ ವಿಮೆ ಮತ್ತು ಎಫ್‌ಸಿ ಚಾಲನೆಯಲ್ಲಿರಬೇಕು. ಚಾಲಕರಿಗೆ ವಾಹನ ಚಾಲನ ಪರವಾನಿಗೆ ಸೇರಿದಂತೆ ಇನ್ನಿತರ ದಾಖಲೆಗಳು ಕಡ್ಡಾಯವಾಗಿರಬೇಕು ಎಂದು ಅನಿಲ್‌ಕುಮಾರ್ ತಿಳಿಸಿದರು.

ಕಾರ್ಖಾನೆ ಬಳಿ ಕಬ್ಬು ಇಳಿಸಿದ ನಂತರ ಎತ್ತಿನಗಾಡಿ ಮತ್ತು ಟ್ರಾೃಕ್ಟರ್‌ಗಳು ಮರದ ಗೂಟಗಳನ್ನು ತೆಗೆಯದೆ ಹೋಗುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಕಾರ್ಖಾನೆಯಿಂದ ಹೊರಹೋಗುವ ಮುನ್ನವೇ ಅವುಗಳನ್ನು ತೆರೆವುಗೊಳಿಸಲು ಕ್ರಮವಹಿಸಬೇಕು ಎಂದರು.

ಸಂಚಾರ ನಿಯಮ ಉಲ್ಲಂಘಿಸಿ ಸಂಭವಿಸುವ ಅಪಘಾತಗಳಿಗೆ ಅಥವಾ ರಸ್ತೆಯಲ್ಲಿ ಕಬ್ಬು ಬಿದ್ದು ಸಾರ್ವಜನಿಕರಿಗೆ ತೊಂದರೆಯಾದರೆ ಸಂಬಂಧಿಸಿದವರೇ ನೇರ ಹೊಣೆ ಆಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಕಬ್ಬು ವಿಭಾಗದ ವ್ಯವಸ್ಥಾಪಕ ಮಹದೇವಪ್ರಭು, ಅಧಿಕಾರಿಗಳಾದ ನಿತೀಶ್ ಜಯರಾಮ್, ನಿಂಗಯ್ಯ, ಫೀಲ್ಡ್ ಮ್ಯಾನ್ ಕಾರ್ಕಹಳ್ಳಿ ಸಿದ್ದೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net