ಪ್ರತಿಭಾ ಪುರಸ್ಕಾರಕ್ಕೆ ಮೂರು ಲಕ್ಷ ರೂ ಅನುದಾನ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆಯನ್ನು ಭತ್ತದ ರಾಶಿ ಪೂಜೆ ಮಾಡುವ ಮೂಲಕ ಶಾಸಕ ಪಿ.ರವಿಕುಮಾರ್ ಗಣಿಗ ಉದ್ಘಾಟಿಸಿದರು.
ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆಯನ್ನು ಭತ್ತದ ರಾಶಿ ಪೂಜೆ ಮಾಡುವ ಮೂಲಕ ಶಾಸಕ ಪಿ.ರವಿಕುಮಾರ್ ಗಣಿಗ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಜಾನಪದ ಜಾತ್ರೆ
  • ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ನನ್ನ ವೇತನದಲ್ಲಿ ಮೂರು ಲಕ್ಷ ರೂಗಳನ್ನು ಪ್ರತಿಭಾ ಪುರಸ್ಕಾರಕ್ಕೆಂದು ನೀಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನ ವನರಂಗದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ನೀಡಲು 3 ಲಕ್ಷ ರೂಗಳನ್ನು ಕಳೆದ ವರ್ಷವೂ ಇದೆ. ಅದೇ ರೀತಿ ಈ ಬಾರಿಯೂ ಕೊಡಲಾಗುವುದು ಎಂದರು.
ಕಾಲೇಜು ಅಭಿವೃದ್ದಿ ಮಾಡುವುದು ನನ್ನ ಕರ್ತವ್ಯ. ಪ್ರಾಧ್ಯಾಪಕರಿಗೆ ಇರುವಂತೆ ವಿದ್ಯಾರ್ಥಿನಿಯರಿಗೂ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲು ಒಂದು ಕೋಟಿ ರೂ ಅನುದಾನ ನೀಡಲಾಗುವುದು. ಅಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಕಾಲೇಜಿನ ಕಾಂಪೌಂಡ್ ಹಾಳಾಗಿದೆ. ಇದನ್ನು ಸರಿಪಡಿಸಲು ಮೂರು ಕೋಟಿ ರೂ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ಸಚಿವರ ಗಮನಕ್ಕೆ ತಂದು ಕಾಂಪೌಂಡ್‌ಗೆ ಹೊಸ ರೂಪ ನೀಡಲಾಗುವುದು. ಮಂಡ್ಯ ವಿಶ್ವವಿದ್ಯಾಲಯದ ಹೆಬ್ಬಾಗಿಲಿನ ಮಾದರಿಯಲ್ಲಿಯೇ ಈ ಕಾಲೇಜಿನಲ್ಲಿಯೂ ಕೆಲಸ ಮಾಡಿಸಲಾಗುವುದು ಎಂದರು.
ಏ.30ರಂದು ಮಂಡ್ಯ ವಿವಿ ಆವರಣದಲ್ಲಿ ವಿವಿಧ ಕಟ್ಟಡಗಳು ಮತ್ತು ಹೆಬ್ಬಾಗಿಲು ಲೋಕಾರ್ಪಣೆ ಕಾರ್ಯಕ್ರಮದ ನೆಪದಲ್ಲಿ ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಗುತ್ತಿದೆ. ಅಂದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು. ಅಂದಿನ ಸಮಾರಂಭಕ್ಕೆ ಒಂದು ಲಕ್ಷ ವಿದ್ಯಾರ್ಥಿಗಳ ಸೇರಿಸುವ ಗುರಿ ಹೊಂದಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಹೆಸರು ನೋಂದಾಯಿಸಿ ಎಂದು ತಿಳಿಸಿದರು.
ಹರಿಕಥೆ ವಿದ್ವಾನ್ ಉಮೇಶ್ ಶಿವಾರ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ಇಂತಹ ಮನಸ್ಥಿತಿ ಬದಲಾಗುವುದರ ಜತೆಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕಿದೆ. ಜತೆಗೆ ವಿಶ್ವಾಸ ಮೂಡಿಸಬೇಕಿದೆ. ನಗು ಜೀವನಕ್ಕೆ ದಿವ್ಯೌಷಧ. ಹೆಚ್ಚು ನಗಾಡಿ. ಆದರೆ, ಅತಿಯಾಗಿ ನಗಬೇಡಿ. ಇಲ್ಲದಿದ್ದರೆ ಅಪಾರ್ಥವಾಗುತ್ತದೆ. ಜಾನಪದ ಹಾಡು ಕೇಳಿ ಜಾತ್ರೆಯಲ್ಲಿ ತಾಪತ್ರೆಗಳನ್ನು ಮರೆಯಿರಿ. ಆನಂದಮಯದಿಂದ ಅನಂತಸುಖವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಪ್ರೊ.ಕೆ.ಗುರುರಾಜ್‌ಪ್ರಭು ಅಧ್ಯಕ್ಷತೆ ವಹಿಸಿದ್ದರು. ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ದಾನೇಗೌಡ, ಖಜಾಂಜಿ ಡಾ.ಗುಲೇ ಆರೀಫಾ, ಸಹಾಯಕ ಪ್ರಾಧ್ಯಾಪಕ ಪ್ರೊ.ಶಿವರಾಜು, ವಿದ್ಯಾರ್ಥಿ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಎ.ಎಸ್.ಅನುಶ್ರೀ, ಗೌರವಾಧ್ಯಕ್ಷೆ ಎಸ್.ಕೌಸಲ್ಯ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯೆ ಸುನೀತಾ ರಾಜೇಶ್, ನಗರಸಭೆ ಮಾಜಿ ಸದಸ್ಯ ಶ್ರೀಧರ್ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಕ್ರೀಡಾಂಗಣದಿಂದ ಜಾನಪದ ಕಲಾತಂಡಗಳೊಂದಿಗೆ ಎತ್ತಿನಗಾಡಿಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮತ್ತು ಅಥಿತಿಗಳನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು. ಮಾರಮ್ಮ ಮತ್ತು ಹುತ್ತಕ್ಕೆ ಪೂಜೆ ತನಿ ಎರೆದು, ರಾಶಿಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇಸಿ ತಿನಿಸುಗಳು ಮತ್ತು ಸಾಂಪ್ರದಾಯಿಕ ಉಡುಗೆ ತೊಡುಗೆಗಳು ನೋಡುಗರ ಗಮನ ಎಳೆಯಿತು. ಜಾನಪದ ಜಾತ್ರೆ ಹಲವು ವಿಶೇಷತೆಗಳಿಂದ ಕೂಡಿತು. ವಿದ್ಯಾರ್ಥಿನಿಯರು ಕಂಸಾಳೆ ಮತ್ತು ಡೊಳ್ಳು ಕುಣಿತ, ಪೂಜಾಕುಣಿತ ಕಲಿತು ಪ್ರದರ್ಶನ ನೀಡಿದರು. ಗಾರುಡಿ-ಬೆದರುಗೊಂಬೆಗಳು, ಕಿಂಗ್‌ಕಾಂಗ್ ವೇಷಭೂಷಣ ಎಲ್ಲರ ಗಮನ ಸಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net