ಮದ್ದೂರು ನಗರದ ಸೆಸ್ಕ್ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆಗಳ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಶಿವಕುಮಾರ್, ಮೋಹನ್, ಮಹದೇವು, ಪ್ರದೀಪ್, ಸುನಿತಾ, ಬಸವರಾಜು, ನವೀನ್ ಇದ್ದರು.
ಮದ್ದೂರು: ನಗರ ಸೇರಿದಂತೆ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯುತ್ ಸಮಸ್ಯೆ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ವ್ಯಾಪ್ತಿಯಲ್ಲಿ 220 ಕೆವಿ ಸಾಮಾರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದ ಕೆಲಸಗಳು ನಡೆಯುತ್ತಿವೆ. ಕೂಳಗೆರೆಯಲ್ಲೂ ಬುಧವಾರ ವಿದ್ಯುತ್ ಉಪ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಲಾಗುವುದು. ಈ ಮೂಲಕ ಕನಿಷ್ಟ ಒಂದು ವರ್ಷದೊಳಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ವಿದ್ಯುತ್ ಸಮಸ್ಯೆಗಳು ಉಂಟಾಗದದಂತೆ ಕ್ರಮವಹಿಸಲಾಗಿದೆ ಎಂದರು.
ಇಂದಿನ ಸಭೆಯಲ್ಲಿ ಹಲವಾರು ಭಾಗಗಳ ರೈತರು ತಮ್ಮ ಕೃಷಿ ಪಂಪ್‌ಸೆಟ್‌ಗಳಿಗೆ ಸಂರ್ಪಕವಾಗಿ ವಿದ್ಯುತ್ ಪೂರೈಕೆ ಸೇರಿದಂತೆ ತೋಟದ ಮನೆಗಳಲ್ಲಿ ರೈತರು ಕಟ್ಟಿರುವ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ವಿಚಾರದ ಬಗ್ಗೆ ಕೆಲವು ಗೊಂದಲಗಳಿರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ ಎಂದರು.
ಕೆಲವೊಮ್ಮೆ ವಿದ್ಯುತ್ ಅಭಾವ ಉಂಟಾದಾಗ ಅಲ್ಲಲ್ಲಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಬಗ್ಗೆ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಸಾರ್ವಜನಿಕರಿಂದ ಕೇಳಿ ಬರುವ ಯಾವುದೇ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ತಾಲೂಕು ಮಟ್ಟದ ಅಧಿಕಾರಿಗಳು ಕೇಂದ ್ರಸ್ಥಾನದಲ್ಲಿ ಉಳಿದುಕೊಂಡು ಜನರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಮುಂದಾಗಬೇಕು, ಅನಗತ್ಯವಾಗಿ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೆಸ್ಕ್ ಮದ್ದೂರು ವಿಭಾಗದ ಇಇ ಶಿವಕುಮಾರ್, ಇಂಜಿನಿಯರ್‌ಗಳಾದ ಮೋಹನ್, ಮಹದೇವು, ಪ್ರದೀಪ್, ಲೆಕ್ಕಾಧಿಕಾರಿ ಸುನೀತಾ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾಲೂಕು ಅಧ್ಯಕ್ಷ ಬಸವರಾಜು, ಸಿಪಿಐ ನವೀನ್‌ಕುಮಾರ್, ರೈತರು ಇದ್ದರು.