ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 177 ಕೆರೆಗಳಿಗೆ ಟೆಂಡರ್
ಯಶಸ್ಸು ಗಳಿಸಿದವರ ಯಶೋಗಾಥೆ ಸಿದ್ಧಪಡಿಸಿ
ಮಂಡ್ಯ:ರೈತರ ಆದಾಯ ಹೆಚ್ಚಿಸುವಲ್ಲಿ ಕೃಷಿಯಷ್ಟೇ ಮಹತ್ವದ ಪಾತ್ರವನ್ನು ಮೀನುಗಾರಿಕೆ ವಹಿಸುತ್ತದೆ. ಆದ್ದರಿಂದ ಮೀನು ಸಾಕಾಣಿಕೆ ಕುರಿತು ರೈತರಿಗೆ ತರಬೇತಿ ನೀಡುವ ಮೂಲಕ ಅವರನ್ನು ಉತ್ತೇಜಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 2025-26ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸಸಂಪದ ಯೋಜನೆ ಅನುಷ್ಠಾನ ಮತ್ತು ಮೇಲುಸ್ತುವಾರಿ ಸಂಬಂಧ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ 177 ಕೆರೆಗಳು ಇದೆ. ಈಗಾಗಲೇ ಹಲವು ಕೆರೆಗಳಿಗೆ ಟೆಂಡರ್ ಕರೆಯಲಾಗಿದೆ. ಜಿಲ್ಲೆಯಲ್ಲಿ 2021ನೇ ಸಾಲಿನಿಂದ 2025ನೇ ಸಾಲಿನವರೆಗೂ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ 742 ಫಲಾನುಭವಿಗಳಿದ್ದಾರೆ. ಇಲ್ಲಿಯವರೆಗೂ 124 ಫಲಾನುಭವಿಗಳಿಗೆ 513.38 ಲಕ್ಷ ರೂ ಸಹಾಯಧನ ನೀಡಲಾಗಿದೆ. ಮೀನುಗಾರಿಕೆ ಇಲಾಖೆಯಿಂದ 1 ಹೆಕ್ಟೇರ್ ಪ್ರದೇಶದಲ್ಲಿ ಮೀನು ಸಾಕಾಣಿಕೆಗೆ ಮಾಡಲು 7 ಲಕ್ಷ ರೂ ಸಹಾಯಧನವನ್ನು ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಶೇ.60ರಷ್ಟು ಸಬ್ಸಿಡಿ ಹಾಗೂ ಸಾಮಾನ್ಯ ವರ್ಗಗಳಿಗೆ ಶೇ.40ರಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆಯಿಂದ ಸೌಲಭ್ಯ ಪಡೆದು ಯಶಸ್ಸು ಗಳಿಸಿದವರ ಯಶೋಗಾಥೆ ಸಿದ್ಧಪಡಿಸಿ. ಹಿಂದೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸೌಲಭ್ಯ ಪಡೆದ ಅರ್ಹ ಫಲಾನುಭವಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರಾ ಎಂಬುದನ್ನು ಪರಿಶೀಲಿಸಿ. ಮೀನುಗಾರಿಕೆ ಮಾಡಲು ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸುವುದರ ಜತೆಗೆ ಮೀನುಗಾರಿಕೆ ಕುರಿತು ಸೂಕ್ತ ತರಬೇತಿ ನೀಡಿ. ಮೀನುಗಾರರು ಹಾಗೂ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಬೇಕು. ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 30 ಸಾವಿರಕ್ಕೂ ಹೆಚ್ಚು ಟನ್ ಮೀನು ಉತ್ಪಾದನೆ ಆಗುತ್ತಿದೆ. ಕರಾವಳಿ ಹೊರತುಪಡಿಸಿ ಮೀನುಗಾರಿಕೆಯಲ್ಲಿ ರಾಜ್ಯದಲ್ಲಿ ಜಿಲ್ಲೆ ಹತ್ತನೇ ಸ್ಥಾನದೊಳಗಿದೆ ಎಂದು ಹೇಳಿದರು.
ಮೀನುಗಾರಿಕೆ ಮಾಡಲು ವರ್ಷ ಪೂರ್ತಿ ನೀರು ಅಗತ್ಯ. ಹಾಗಾಗಿ ಜಿಲ್ಲೆಯ ವರ್ಷ ಪೂರ್ತಿ ನೀರಿನ ಲಭ್ಯತೆ ಇರುವ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಮೀನುಗಾರಿಕೆ ಪ್ರೋತ್ಸಾಹ ನೀಡಿ. ಜಿಲ್ಲೆಯಲ್ಲಿ ಬೇಡಿಕೆ ಇರುವ ಮೀನಿನ ತಳಿಯನ್ನು ಅಭಿವೃದ್ಧಿಪಡಿಸಿ. ಆ ವರ್ಷ ಅರ್ಹ ಮೀನುಗಾರರಿಗೆ ಉತ್ತೇಜನ ನೀಡಲು ನೀಡಿದ ಮತ್ಸ್ಯ ವಾಹನಗಳು ಉತ್ತಮ ಲಾಭ ಗಳಿಸುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಾಬಾ ಸಾಬ್, ಸಹಾಯಕ ನಿರ್ದೇಶಕರಾದ ಲೋಕೇಶ್, ಪೂಜಾಶ್ರೀ, ಪುಷ್ಪಲತಾ, ಟಿ.ಡಿ.ಜಗದೀಶ್, ಮಹದೇವಸ್ವಾಮಿ, ವಿ.ಸಿ ಫಾರ್ಮ್‌ನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಕಮಲಾಬಾಯಿ ಕೂಡಗಿ ಇತರರಿದ್ದರು.