ವಿಬಿ ಜಿ ರಾಮ್ ಜಿ ಹಿಂಪಡೆಯುವವರೆಗೂ ಹೋರಾಟ

ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಚಲುವರಾಜು, ಮಹೇಶ್, ಉಮಾ, ಮಂಚಶೆಟ್ಟಿ, ರಾಜಣ್ಣ ಇದ್ದರು.
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಚಲುವರಾಜು, ಮಹೇಶ್, ಉಮಾ, ಮಂಚಶೆಟ್ಟಿ, ರಾಜಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಹೇಳಿಕೆ
  • ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಮದ್ದೂರು: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಹಿಂಪಡೆದು, ಹಿಂದಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮುಂದುವರಿಸುವವರೆಗೂ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಬೋರನದೊಡ್ಡಿ, ನಿಡಘಟ್ಟ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಿರುವ ನೂತನ ಮಳಿಗೆಗಳನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಗ್ರಾಮೀಣ ಪ್ರದೇಶದಿಂದ ನಗರದತ್ತ ಕೃಷಿ ಕೂಲಿ ಕಾರ್ಮಿಕರ ವಲಸೆ ತಡೆಯುವುದು, ಸಮಾನ ಕೂಲಿ, ಆರ್ಥಿಕ ಚೈತನ್ಯದಿಂದ ಗ್ರಾಮ ಸ್ವರಾಜ್ಯ ಕಾಣುವ ಉದ್ದೇಶದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿದ್ದರು. ಈ ಯೋಜನೆಯಿಂದಾಗಿ ಸಾವಿರಾರು ಕೆರೆ ಕಟ್ಟೆ , ರಸ್ತೆ, ಚರಂಡಿ, ಕಾಲುವೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ಯೋಜನೆ ಅನುಕೂಲವಾಗುತ್ತಿತ್ತು ಎಂದರು.
ನರೇಗಾ ಯೋಜನೆಯ ಆಶಯಗಳಿಗೆ ಜಿ ರಾಮ್ ಜಿ ಯೋಜನೆ ತದ್ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದೆ ಗುತ್ತಿಗೆದಾರರಿಗೆ ನರೇಗಾ ಯೋಜನೆಯಲ್ಲಿ ನಿಷೇಧಿಸಲಾಗಿತ್ತು. ಆದರೆ ಈಗ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಲಾಗಿದ್ದು, ಉಳ್ಳವರಿಗೆ ಅನುಕೂಲ ಮಾಡುವ ಯೋಜನೆ ಇದಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ವಿಚಾರವಾಗಿ ರಾಜ್ಯ ಸರ್ಕಾರ ವಿಶೇಷ ಜಂಟಿ ಅಧಿವೇಶನವನ್ನು ನಡೆಸುತ್ತಿದ್ದು, ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ 10 ಕಿ.ಮೀ. ಪಥಸಂಚಲನವನ್ನು ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ಜನರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.
ನಂತರ ನಿಡಘಟ್ಟ ಗ್ರಾಪಂ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಡಘಟ್ಟ ಗ್ರಾಮ ಪಂಚಾಯಿತಿ ಅನುದಾನದಿಂದ ಅಂಗವಿಕಲರಿಗೆ ಸಹಾಯಧನ ಮತ್ತು ಜೀತ ವಿಮುಕ್ತಿಯಾದವರಿಗೆ ನನ್ನ ಗುರುತು ಪ್ರಮಾಣ ಪತ್ರಗಳನ್ನು ಶಾಸಕ ಕೆ.ಎಂ.ಉದಯ್ ವಿತರಣೆ ಮಾಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಗ್ರಾಪಂ ಅಧ್ಯಕ್ಷೆ ಉಮಾ, ಸದಸ್ಯರಾದ ಮಹೇಶ್, ಮಂಚಶೆಟ್ಟಿ, ಉದುಸ್, ಪವಿತ್ರಾ, ರಾಜಣ್ಣ, ಚಂದ್ರ, ಮುಖಂಡರಾದ ಮಹೇಶ್, ಸತೀಶ್, ಭೀಮಣ್ಣ, ಕೆ.ಎಂ.ರವಿ, ಪಿಡಿಒ ಶೀಲಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net