ರೈತರನ್ನು ಸೆಳೆದ ಸುಭಾಷ್ ಪಾಳೇಕರ್ ಕೃಷಿ: ಉಮ್ಮಡಹಳ್ಳಿಯ ಶೇಖರ್ ಜಮೀನಿನಲ್ಲಿ ಕ್ಷೇತ್ರೋತ್ಸವ

  ಮಂಡ್ಯ ತಾಲೂಕು ಉಮ್ಮಡಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕ್ಷೇತ್ರೋತ್ಸವದಲ್ಲಿ ಬಟ್ಟೆ ಬ್ಯಾಗ್‌ಗಳನ್ನು ವಿತರಣೆ ಮಾಡಲಾಯಿತು.
ಮಂಡ್ಯ ತಾಲೂಕು ಉಮ್ಮಡಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕ್ಷೇತ್ರೋತ್ಸವದಲ್ಲಿ ಬಟ್ಟೆ ಬ್ಯಾಗ್‌ಗಳನ್ನು ವಿತರಣೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧೆಡೆಯಿಂದ ಆಗಮಿಸಿದ್ದ ಕೃಷಿಕರು
  • ಪಾಸ್ಟಿಕ್ ವಿರೋಧಿಯಿಂದ ಪರಿಸರ ಜಾಗೃತಿ
ಮಂಡ್ಯ: ನಾಟಿ(ಹಳ್ಳಿಕಾರ್) ಹಸು ಆಧಾರಿತ ಸುಭಾಷ್ ಪಾಳೇಕರ್ ಕೃಷಿ ಜನಾಂದೋಳನ ಭಾಗವಾಗಿ ತಾಲೂಕಿನ ಉಮ್ಮಡಹಳ್ಳಿ ಗ್ರಾಮದ ಪ್ರಗತಿಪರ ರೈತ ಶೇಖರ್ ಅವರ ಜಮೀನಿನಲ್ಲಿ ಆಯೋಜಿಸಿದ್ದ ಕಬ್ಬಿನ ಬಹುಬೆಳೆಯ ಕ್ಷೇತ್ರೋತ್ಸವ ವಿವಿಧೆಡೆಯಿಂದ ಆಗಮಿಸಿದ್ದ ರೈತರನ್ನು ಆಕರ್ಷಿಸಿತು.
ಸುಭಾಷ್ ಪಾಳೇಕರ್ ಕೃಷಿ ಆಧಾರಿತವಾಗಿ ಶೇಖರ್ ಅವರು ಕಬ್ಬಿನ ಬಹುಬೆಳೆಯನ್ನು ಬೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆಸಕ್ತ ರೈತರಿಗಾಗಿಯೇ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು. ವಿಷಮುಕ್ತವಾದ, ಕೀಟಬಾಧೆ, ರೋಗಬಾಧೆ ಇಲ್ಲದ ಕೃಷಿ ಪದ್ಧತಿಯಾಗಿರುವ ಈ ಮಾದರಿಯ ಬಗ್ಗೆ ಶೇಖರ್ ಸವಿಸ್ತಾರವಾಗಿ ವಿವರಿಸಿದರು.
ಕಬ್ಬು ಬೆಳೆಯ ನಡುವೆ ತರಕಾರಿ, ದ್ವಿದಳ ಧಾನ್ಯ, ಅರಿಸಿನ, ಮೆಣಸು, ಏಲಕ್ಕಿ ಬೆಳೆಯುವ ಬಗ್ಗೆ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮಕ್ಕೆಂದು ವಿವಿಧೆಡೆಯಿಂದ ಆಗಮಿಸಿದ ಹಿರಿಯ ಹಾಗೂ ಯುವ ರೈತರು ಆಸಕ್ತಿಯಿಂದಲೇ ವಿಷಯ ತಿಳಿದುಕೊಂಡರು. ಬೇಸಾಯದಲ್ಲಿ ನಾಟಿ ಹಸುವಿನ ಪಾತ್ರ, ಸಾವಯವ ಕೃಷಿಯಿಂದಾಗುವ ಅನುಕೂಲದ ಬಗ್ಗೆ ವಿವರ ನೀಡಲಾಯಿತು. ಅಂತೆಯೇ ಶೇಖರ್ ಅವರ ಜಮೀನಿನಲ್ಲಿ ಅಳವಡಿಸಿಕೊಂಡಿರುವ ವಿಶೇಷ ಪದ್ಧತಿ ಗಮನಸೆಳೆಯಿತು. ಇದೇ ವೇಳೆ ಶೇಖರ್ ಅವರ ತೋಟದಲ್ಲಿ ಬೆಳೆದಿರುವ ಹಣ್ಣುಗಳ ಜತೆಗೆ ಮೀನುಗಾರಿಕೆ, ಕುರಿ ಮತ್ತು ಹಳ್ಳಿಕಾರ್ ಸಾಕಾಣಿಕೆ ಕುರಿತು ಪ್ರಾತ್ಯಕ್ಷಿತೆ ನಡೆಯಿತು. ನಂತರ ಸಾಮೂಹಿಕ ಭೋಜನೆ ಮಾಡಲಾಯಿತು.
ಸುಭಾಷ್ ಪಾಳೇಕರ್ ಕೃಷಿಕರಾದ ಅನಂತರಾವ್, ಬೋರಲಿಂಗೇಗೌಡ, ಹಲ್ಲೇಗೆರೆ ಶಿವರಾಂ ಇತರರಿದ್ದರು.

ಪಾಸ್ಟಿಕ್ ವಿರೋಧಿಯಿಂದ ಪರಿಸರ ಜಾಗೃತಿ
ಕ್ಷೇತ್ರೋತ್ಸವದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪರಿಸರ ಮಿತ್ರ ಜಯಶಂಕರ ಅವರು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಹಾಗೂ ನಿಷೇಧಿತ ನೀರಿನ ಬಾಟಲಿ ಬಳಕೆ ನಿಲ್ಲಿಸುವಂತೆ ಜಾಗೃತಿ ಮೂಡಿಸಿದರು. ಇದೇ ವೇಳೆ ಸುಭಾಷ್ ಪಾಳೇಕರ್ ಕೃಷಿಕ ಶೇಖರ್ ದಂಪತಿಯನ್ನು ಸನ್ಮಾನಿಸಲಾಯಿತು. ಅಂತೆಯೇ ಹಲವರಿಗೆ ಬಟ್ಟೆ ಬ್ಯಾಗನ್ನು ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net