ಶ್ರೀರಂಗಪಟ್ಟಣದ ವಿವಿಧೆಡೆ ಸಡಗರ-ಸಂಭ್ರಮದಿಂದ ಹಬ್ಬ ಆಚರಣೆ

 ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯ ಬೆಂಗಳೂರು-ಮೈ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಗುರುವಾರ ಸಂಕ್ರಾಂತಿ ಸುಗ್ಗಿಯ ಪ್ರಯುಕ್ತ ರೈತರು ತಮ್ಮ ರಾಸುಗಳು ಹಾಗೂ ಜಾನುವಾರುಗಳನ್ನು ಹಿಡಿದು ಧಗಧಗನೆ ಹೊತ್ತು ಉರಿಯುತ್ತಿದ್ದ ಹುಲ್ಲಿನ ಸಾಲಿನ ಬೆಂಕಿಯ ಜ್ವಾಲೆಯಲ್ಲಿ ಕಿಚ್ಚು ಹಾಯಿಸಿ ಜನರ ಗಮನ ಸೆಳೆದರು.
ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯ ಬೆಂಗಳೂರು-ಮೈ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಗುರುವಾರ ಸಂಕ್ರಾಂತಿ ಸುಗ್ಗಿಯ ಪ್ರಯುಕ್ತ ರೈತರು ತಮ್ಮ ರಾಸುಗಳು ಹಾಗೂ ಜಾನುವಾರುಗಳನ್ನು ಹಿಡಿದು ಧಗಧಗನೆ ಹೊತ್ತು ಉರಿಯುತ್ತಿದ್ದ ಹುಲ್ಲಿನ ಸಾಲಿನ ಬೆಂಕಿಯ ಜ್ವಾಲೆಯಲ್ಲಿ ಕಿಚ್ಚು ಹಾಯಿಸಿ ಜನರ ಗಮನ ಸೆಳೆದರು.
Published on

 ರಾಸುಗಳನ್ನು ವಿಶೇಷವಾಗಿ ಸಂಗರಿಸಿ ಕಿಚ್ಚು ಹಾಯಿಸಿದ ಮಾಲೀಕರು

ಶ್ರೀರಂಗಪಟ್ಟಣ: ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀರಂಗಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಾಸುಗಳು ಹಾಗೂ ರೈತರ ಸಾಕುಪ್ರಾಣಿಗಳ ಕಿಚ್ಚು ಹಾಯಿಸುವಿಕೆ ರೈತಾಪಿ ವರ್ಗದಿಂದ ಗುರುವಾರ ಸಂಭ್ರಮ ಸಡಗರದ ಉತ್ಸಾಹದಿಂದ ಜರುಗಿತು. 
ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಸುಗ್ಗಿ ದಿನದ ಮುಂಜಾನೆಯೇ ರೈತರು ತಮ್ಮ ಜಾನುವಾರಗಳ ಮೈ ತೊಳೆದು ಅವುಗಳಿಗೆ ಹರಿಶಿಣ ಬಳಿದು ವಿಶೇಷವಾಗಿ ಸಿಂಗರಿಸಿ, ಬಣ್ಣ-ಬಣ್ಣದ ಟೇಪು, ರಿಬ್ಬನ್ನಗಳ ಕುಚ್ಚಿನಲಿ ವರ್ಣರಂಜಿತವಾಗಿ ಅಲಂಕೃತಗೊಳಿಸಿ ದೊಡ್ಡ ದೊಡ್ಡ ಹೂವಿನ ಹಾರಗಳಗಳನ್ನು ಹಾಕಿ ಪೂಜಿಸಿದ ತಮ್ಮ ರಾಸುಗಳನ್ನು ಸಂಜೆ ಗೋಧೂಳಿ ಸಮಯದಿ ತಮ್ಮೂರಿನ ಮುಂಭಾಗದ ರಸ್ತೆಗಳಲ್ಲಿ ಅಡ್ಡಲಾಗಿ ಹಾಕಿದ ಹುಲ್ಲಿನ ಸಾಲುಗಳ ಬೆಂಕಿಯ ಮೇಲೆ ಓಡಿ ಕಿಚ್ಚು ಹಾಯಿಸಿ ಬಳಿಕ ಆರತಿ ಬೆಳಗಿ ದೃಷ್ಟಿ ತೆಗೆದರು.
ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಂಕ್ರಮಣದ ಪ್ರಯುಕ್ತ ಹೆಣ್ಣು ಮಕ್ಕಳು ಹಾಗೂ ಪುಟಾಣಿ ಮಕ್ಕಳು ಮುಂಜಾನೆಯೇ ಹೊಸ ಬಟ್ಟೆಗಳ ಧಿರಿಸುಗಳನ್ನು ಧರಿಸಿ ತಮ್ಮ ಸಂಬಂಧಿಕರು ಮತ್ತು ನೆರೆ-ಹೊರೆಯ ನಿವಾಸಿಗಳಿಗೆ ಕಬ್ಬಿನ ತುಂಡುಗಳೊಂದಿಗೆ ಎಳ್ಳು-ಬೆಲ್ಲ ವಿತರಿಸಿ ಶುಭನುಡಿಯಲಿ ಪರಸ್ಪರ ಶುಭಕೋರುವ ಮೂಲಕ ರೈತಾಪಿ ಹಬ್ಬವನ್ನು ಸಡಗರದಿಂದ ಸಂಭ್ರಮಿಸಿದರು.
ವರ್ಷಪೂರ್ತಿ ರೈತಾಪಿ ಜನರ ದುಡಿಮೆಗಾಗಿ ನೇಗಿಲು-ನೊಗಕೆ ಹೆಗಲುಕೊಟ್ಟು ದುಡಿಯುವ ರಾಸುಗಳಿಗೆ ಸಂಕ್ರಾಂತಿ ದಿನದಂದು ಮಾಲೀಕರು ರಾಸುಗಳ ಹಾರೈಕೆಯಲ್ಲಿ ತೊಡಗುವುದು ಗ್ರಾಮೀಣ ಭಾಗದ ವಾಡಿಕೆ.
ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ರಾಸುಗಳಿಗೆ ಸ್ನಾನ ಮಾಡಿಸಿ ಹುಲ್ಲು, ಮೇವುಗಳನ್ನು ಹಾಕಿ ಅವುಗಳ ಮೈ ಸವರಿ ಸಂತೈಸುವ ರೈತರು, ಸಂಜೆಯ ವೇಳೆಗೆ ರಾಸುಗಳನ್ನು ಬಗೆ ಬಗೆಯ ಬಣ್ಣ ಹಾಗೂ ವಿಶೇಷ ಹೂವುಗಳಿಂದ ಸಿಂಗರಿಸಿ ಗ್ರಾಮದ ಹೆಬ್ಬಾಗಿಲಿನಲ್ಲಿ ಹಾಕಲಾಗುವ 3 ಸಾಲಿನ ಹುಲ್ಲಿನ ಬೆಂಕಿಯಲ್ಲಿ ಸೋಂಕು ಹಾಗೂ ಜನರ ದೃಷ್ಟಿ ತಾಕದಂತೆ ಕಿಚ್ಚು ಹಾಯಿಸುವುದು ದೇಸಿ ನೆಲೆಗಟ್ಟಿನ ಸಂಪ್ರದಾಯ. ಬಳಿಕ ಮನೆಗೆ ಬರುವ ರಾಸುಗಳಿಗೆ ಕುಟುಂಬಸ್ಥರು ಆರತಿ ಎತ್ತಿ, ಮನೆಯಲ್ಲಿ ಮಾಡಲಾಗಿರುವ ಬಗೆ ಬಗೆಯ ಕಿಚಡಿಯನ್ನು ಪ್ರಸಾದ ರೂಪದಲ್ಲಿ ಅವುಗಳಿಗೆ ನೈವೇದ್ಯ ನೀಡಿ ರಾಸುಗಳ ತಿಂದು ಬಿಟ್ಟ ಆಹಾರವನ್ನು ಪ್ರಸಾದವಾಗಿ ಕುಟುಂಬಸ್ಥರು ಸ್ವೀಕರಿಸಿ ಹಬ್ಬವನ್ನು ಆಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net