ಮಂಡ್ಯ: ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಿ ಏ.11ರಿಂದ ನಡೆಯುತ್ತಿರುವ ಪಾದಯಾತ್ರೆ ಜೂ.6ರಂದು ಮುಕ್ತಾಯಗೊಳಿಸಲಾಗುತ್ತಿದೆ. ಅಂತೆಯೇ ಕಳೆದ 36 ದಿವಸದಲ್ಲಿ 950 ಕಿ.ಮೀ ಪಾದಯಾತ್ರೆ ಮಾಡಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ತಿಳಿಸಿದರು.
ರೈತ ಸಂಘದ ಸಾರಥ್ಯದಲ್ಲಿ ಮತ್ತು ಎಸ್‌ಡಿಎಂಸಿ ಸದಸ್ಯರ ನೇತೃತ್ವದ ‘ಸರ್ಕಾರಿ ಶಾಲೆ ನನ್ನವ್ವ’ ಎಂಬ ವಾಕ್ಯದೊಡನೆ ಮುಚ್ಚಿರುವ 350 ರಿಂದ 400 ಸರ್ಕಾರಿ ಶಾಲೆಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ತೆರೆಯಬೇಕು. ಸಂವಿಧಾನದ ಆರ್ಟಿಕಲ್ 21ಎ ಅಡಿಯಲ್ಲಿ ಮೂಲ ಸೌಕರ್ಯ, ಗುಣಮಟ್ಟದ ಉಚಿತ ಶಿಕ್ಷಣ ಮತ್ತು ಪ್ರತಿ ಶಾಲೆಯಲ್ಲೂ ಎಲ್‌ಕೆಯಿಇಂದ 5ನೇ ತರಗತಿಯವರೆಗೂ ಸಿಬಿಎಸ್‌ಸಿ ದ್ವಿಭಾಷೆಯಲ್ಲಿ ಶಿಕ್ಷಣ ಸಿಗಬೇಕು. 6ನೇ ತರಗತಿಯಿಂದ 12ನೇ ತರಗತಿಯವರೆಗೂ ನವೋದಯ ಮಾದರಿಯಲ್ಲಿ ಗುಣಮಟ್ಟದ ವಸತಿ ಶಾಲೆಗಳು ನಿರ್ಮಾಣವಾಗಬೇಕೆಂದು ಹೋರಾಟ ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೂ.5ರೊಳಗೆ 500 ರಿಂದ 550 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ನಮ್ಮ ಬೇಡಿಕೆಗೆ ಸರ್ಕಾರ ಮಣಿಯಲೇಬೇಕು. ನಾವು ನಡೆಸುತ್ತಿರುವ ಪಾದಯಾತ್ರೆಗೆ ಜಿಲ್ಲಾಡಳಿತ ಅಥವಾ ಯಾವ ಇಲಾಖೆಯೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರಿ ಶಾಲೆಗಳಿಗಾಗಿಯೇ ಹಲವಾರು ಮಹನೀಯರು ಜಮೀನನ್ನು ದಾನ ನೀಡಿದ್ದಾರೆ. ಅವುಗಳ ರಕ್ಷಣೆ ಮಾಡುವುದನ್ನು ಬಿಟ್ಟು ಒತ್ತುವರಿ ಮಾಡಿಕೊಂಡು ಕಬಳಿಸುವವರಿಗೆ ಅಧಿಕಾರಿಗಳು ಮನ್ನಣೆ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಆದರೆ ಶಿಕ್ಷಕರಾದರೂ ನಮ್ಮ ಹೋರಾಟಕ್ಕೆ ಕನಿಷ್ಟ ಬೆಂಬಲ ನೀಡಲಿಲ್ಲ. ನಾವು ಯಾರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳು ಮುಚ್ಚಿಹೋದರೆ ಶಿಕ್ಷಕರಿಗೇನು ಕೆಲಸ?. ಇಷ್ಟು ತಿಳಿವಳಿಕೆಯೂ ಇಲ್ಲದಿರುವುದು ಆತಂಕಕಾರಿ ಸಂಗತಿ ಎಂದರು.
ಸಂಘದ ಉಪಾಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ತಾಲೂಕು ಅಧ್ಯಕ್ಷ ಬೂದನೂರು ಪುಟ್ಟಸ್ವಾಮಿ, ಕಾರ್ಯದರ್ಶಿ ಸುರೇಶ, ಮುಖಂಡ ಅಮೀನ್‌ಬಾಬು ಇದ್ದರು.
100 ರೂ ಪ್ರೋತ್ಸಾಹ ಧನ ಬಿಡುಗಡೆ ಮಾಡಲಿ
ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹಿಸುವ ಸಲುವಾಗಿ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 50 ರೂ ಹಾಗೂ ಸಕ್ಕರೆ ಕಾರ್ಖಾನೆ ವತಿಯಿಂದ 50 ರೂ ಸೇರಿಸಿ 100 ರೂ ಘೋಷಣೆ ಮಾಡಲಾಗಿದೆ. ಆದರೆ ಈವರೆಗೂ ರೈತರಿಗೆ ಬಿಡುಗಡೆ ಮಾಡಿಲ್ಲ. ಆದ್ದರಿಂದ ಪ್ರೋತ್ಸಾಹ ಧನವನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ವಹಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.
ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವತಃ ಡಿಸಿಯೇ ತಿಳಿಸಿದ್ದಾರೆ. ಸರ್ಕಾರದಿಂದ ಕಬ್ಬು ಬೆಳೆಗಾರರ ಪ್ರೋತ್ಸಾಹಧನ ಬಂದಿದೆ. ಕಾರ್ಖಾನೆಯವರು ವಿತರಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದರು. ಆದರೆ ಕಾರ್ಖಾನೆ ಆಡಳಿತ ಮಂಡಳಿ ಇನ್ನೂ ವಿತರಿಸಿಲ್ಲ. ಈ ನಡೆ ಖಂಡನೀಯ. ತಕ್ಷಣ ರೈತರಿಗೆ ಹಣ ವಿತರಿಸುವಂತೆ ಆಗ್ರಹಿಸಿದರು.
ರೈತ ಹಿತರಕ್ಷಣಾ ಸಮಿತಿ, ಜಿಲ್ಲಾ ರೈತ ಸಂಘಟನೆ, ಕಬ್ಬು ಬೆಲೆಗಾರರ ಸಂಘ, ಕಬ್ಬು ಒಪ್ಪಿಗೆದಾರರ ಸಂಘಟನೆಗಳು ಮತ್ತು ಮೈಷುಗರ್ ವ್ಯಾಪ್ತಿಗೆ ಬರುವ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಭೆ ಕರೆದು ಮೈಷುಗರ್ ಕಾರ್ಖಾನೆಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಆರನೇ ಹಂತದ ಯೋಜನೆ ಸ್ಥಗಿತವಾಗಲಿ
ಕೃಷ್ಣರಾಜಸಾಗರ ಜಲಾಶಯದಿಂದ ಬೆಂಗಳೂರಿಗೆ 6ನೇ ಹಂತದ ನೀರು ಕೊಂಡೊಯ್ಯುವ ಯೋಜನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆಗ್ರಹಿಸಿದರು.
ಮೈಸೂರು ಮಹಾರಾಜರು ಅವರ ಮನೆಯ ಚಿನ್ನಾಭರಣಗಳನ್ನು ಮುಂಬೈನಲ್ಲಿ ಮಾರಾಟ ಮಾಡಿ ಕನ್ನಂಬಾಡಿ ಅಣೆಕಟ್ಟೆ ಕಟ್ಟಿದ್ದು ರೈತರಿಗೆ ನೀರು ಕೊಡುವ ಉದ್ದೇಶದಿಂದ ಎನ್ನುವುದನ್ನು ಜನಪ್ರತಿನಿಧಿಗಳು ಅಥವಾ ಸರ್ಕಾರ ಮರೆಯಬಾರದು. ಈಗಿನ ರಾಜಕಾರಣಿಗಳು ಅದನ್ನು ಮರೆತು ಬೆಂಗಳೂರಿಗೆ 6 ಟಿಎಂಸಿಗೂ ಹೆಚ್ಚು ನೀರನ್ನು ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಟಿ.ಕೆ ಹಳ್ಳಿಯಿಂದ 5 ಹಂತದ ಯೋಜನೆಗಳನ್ನು ರೂಪಿಸಿ ಬೆಂಗಳೂರಿಗೆ ನೀರು ಕೊಂಡೊಯ್ಯಲಾಗುತ್ತಿದೆ. ಈಗ ಕೆ.ಆರ್.ಎಸ್.ನಿಂದಲೇ ನೇರವಾಗಿ ನೀರು ತೆಗೆದುಕೊಂಡು ಕೆಲಸಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಬೆಂಗಳೂರು ಜನರ ಬಗ್ಗೆ ಅಷ್ಟು ಕಾಳಜಿ ಇದ್ದರೆ ಮೇಕೆದಾಟು ಯೋಜನೆಯನ್ನು ರೂಪಿಸಲಿ. ಆ ನಂತರ ಬೆಂಗಳೂರಿಗೆ ನೀರು ಕೊಂಡ್ಯೊಯಿರಿ ಎಂದು ಸಲಹೆ ನೀಡಿದರು.
6ನೇ ಹಂತದ ನೀರು ಕೊಂಡೊಯ್ಯುವ ಯೋಜನೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಕಾವೇರಿ ಹೋರಾಟದ ಮಾದರಿಯಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಕಾವೇರಿ ಹೋರಾಟದ ಕಿಚ್ಚನ್ನು ಹಚ್ಚಿ ಸಹಸ್ರಾರು ಸಂಖ್ಯೆಯ ರೈತರೊಂದಿಗೆ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.